ಕೊಪ್ಪಳ: ಸಾಧಿಸುವ ಛಲವೊಂದಿದ್ದರೆ ಸಾಧನೆಗೆ ಯಾವುದೂ ಅಡ್ಡಿಯಾಗುವುದಿಲ್ಲ. ಕೊಪ್ಪಳ ತಾಲೂಕಿನ ರಮೇಶ ಮತ್ತು ಸುರೇಶ ಬಡಿಗೇರ ಎನ್ನುವ ಸಹೋದರರಿಬ್ಬರು ಇದಕ್ಕೆ ಜ್ವಲಂತ ಉದಾಹರಣೆ. ಕೊಪ್ಪಳದ ಈ ಪ್ರತಿಭಾವಂತ ಜೋಡಿ ರಾತ್ರಿಗುರುಡುತನದಿಂದ ಬಳಲುತ್ತಿದ್ದರೂ, ಇಲ್ಲಿನ ಆಂಜನೇಯ ದೇವಸ್ಥಾನಕ್ಕೆ 29 ಅಡಿ ಎತ್ತರದ ಅತ್ಯಂತ ಸುಂದರವಾದ ರಥವನ್ನು ನಿರ್ಮಿಸಿ, ಕಣ್ಣಿದ್ದವರೆಲ್ಲಾ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ.
ಹುಟ್ಟಿಸಿದ ದೇವರು ಕಣ್ಣಿಗೆ ಬೆಳಕು ನೀಡದಿದ್ದರೂ, ತಮ್ಮ ಅಂಧತ್ವವನ್ನೂ ಮೀರಿ ಆ ದೇವರಿಗೆ ಸಮರ್ಪಣೆ ಮಾಡುವ ರಥವನ್ನು ನಿರ್ಮಾಣ ಮಾಡಿದ ಜೋಡಿಯ ಜೀವನವೆ ಒಂದು ಪ್ರೇರಣೆ. ಶಿಲ್ಪಕಲೆಯಲ್ಲಿ ರಾಜ್ಯ ಪ್ರಶಸ್ತಿ ಪಡೆದ ಮಲ್ಲಪ್ಪ ಮಾಳಪ್ಪ ಬಡಿಗೇರ ಇವರ ಪುತ್ರ ಸುರೇಶ ಮತ್ತು ರಮೇಶ ಬಡಿಗೇರ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರು ಗ್ರಾಮದ ನಿವಾಸಿಗಳು. ಮಲ್ಲಪ್ಪ ಬಡಿಗೇರ ಮರದ ಕೆತ್ತನೆ ಮತ್ತು ಶಿಲ್ಪಕಲೆಯಲ್ಲಿ ನಿಷ್ಣಾತರು. ತಮ್ಮ ಕುರುಡುತನದಿಂದಾಗಿ ಶಾಲೆಗೆ ಹೋಗಲು ಸಾಧ್ಯವಾಗದೆ ಈ ಇಬ್ಬರು ಸಹೋದರರೂ ತಂದೆಯ ಶಿಲ್ಪಕಲೆಯ ಕೆಲಸದಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದರು. ಕಣ್ಣು ಕಾಣದಿದ್ದರೂ ಕೇವಲ ತಮ್ಮ ಸ್ಪರ್ಶ ಸಂವೇದನಾಶೀಲತೆಯಿಂದಲೇ ಮರದ ಮೇಲೆ ಅದ್ಭುತವೆನಿಸುವ ಕಲಾಕೃತಿಗಳನ್ನು ಬಿಡಿಸುವ ಈ ಸಹೋದರರೂ ಒಂದು ಅದ್ಭುತವೆ.
ಕೊಪ್ಪಳದ ಪಟ್ಟಲಚಿಂತೆಯ ಆಂಜನೇಯ ದೇವರಿಗೆ 29 ಅಡಿ ಎತ್ತರದ ರಥ ಸಿದ್ಧಪಡಿಸಲು ತಂದೆ ಮಲ್ಲಪ್ಪ ಒಪ್ಪಿಗೆ ನೀಡಿದ್ದರು. ಆದರೆ ದುರಾದೃಷ್ಟವಶಾತ್ ಇದೇ ಸಂದರ್ಭದಲ್ಲಿ ಅವರು ಮೃತ್ಯುವಶರಾದರು. ರಥದ ಕೆಲಸ ಅರ್ಧಕ್ಕೇ ನಿಂತಾಗ ಗ್ರಾಮಸ್ಥರೆಲ್ಲರೂ ಬಡಿಗೇರ ಸಹೋದರರನ್ನು ರಥದ ಕೆಲಸವನ್ನು ಪೂರ್ತಿ ಮಾಡಿಕೊಡುವಂತೆ ಒತ್ತಾಯಿಸಿದ್ದರು. ತನ್ನ ತಂದೆ ಜೊತೆ ಕೆಲಸ ಮಾಡಿದ್ದ ಅನುಭವ ಹೊಂದಿದ್ದ ಈ ಸಹೋದರರು ರಥವನ್ನು ಪೂರ್ಣಗೊಳಿಸಿ ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ. ಬಡಿಗೇರ ಸಹೋದರರ ಈ ಸಾಧನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.