ಆ ಕಪ್ಪು ಸುಂದರಿ, ನನ್ನ ಬಾಳಿಗೆ ಬಿಳುಪು ತಂದಳು..

ಅವಳು ಎಂದರೆ ನನಗೆ ಏನೋ ಸಂತೋಷ, ಹುರುಪು ಉತ್ಸಾಹ ಎಲ್ಲವೂ.  ಒಬ್ಬರ ಬಾಳಿನಲ್ಲಿ ತನ್ನ ಸಂಗಾತಿ ಬಂದರೆ ಮಾತ್ರ ಜೀವನ ಪಾವನವಾಗಲು ಸಾಧ್ಯ ಅಲ್ಲವೇ. ಹೌದು! ಇದು ಅಕ್ಷರಶಃ ಸತ್ಯ. ಹೀಗೆ ನಾನು ಸಹ ನನ್ನ ಸಂಗಾತಿಯನ್ನು ಹುಡುಕುವ ಭರದಲ್ಲಿದ್ದೆ. ಈ ಪಯಣ ಪ್ರಾರಂಭವಾದದ್ದು ಪದವಿ ಜೀವನದಲ್ಲಿ. ಆ ವಯಸ್ಸೇ ಹಾಗೆ ಅದು ಜೀವನದಲ್ಲಿ ಮರೆಯಲಾಗದ ಕಾಲಘಟ್ಟ. ಆಗ ವಯಸ್ಸು ಅರಳುತ್ತಿರುವ ಗುಲಾಬಿಯಂತೆ  ಅದರದೇ ಆದ ಛಾಪನ್ನು ಮೂಡಿಸುತ್ತದೆ. ಈ ವಯಸ್ಸಿನಲ್ಲಿ ತನ್ನ ಸಂಗಾತಿಯನ್ನು ಹುಡುಕುವ ಹಂಬಲ ಪ್ರಾರಂಭವಾಗುವುದು ಸಹಜ . ಹೀಗೆ ಸಾಗುತ್ತಿದ್ದ ಹಾದಿಯಲ್ಲಿ ನನಗೆ ಒಬ್ಬಳು ಸಿಕ್ಕಳು. ಅವಳನ್ನು ನಾನು ಅರಸಿ ಹೋದದ್ದಲ್ಲ,  ಅವಳೇ  ನನ್ನ ಬಳಿ, ನನ್ನರಸಿಯಾಗಿ. ಬಂದವಳೇ ನನ್ನ ಸಂಗಾತಿ ಆಗಬೇಕೆಂದು ಮನದಾಳದಿಂದ ತೋಡಿಕೊಂಡಳು.

ಇಬ್ಬರ ಪಯಣ ಒಂದೇ ಹಾದಿಯಲ್ಲಿ ಸಾಗುತ್ತಿದ್ದರಿಂದ ಮೊದಲಿಗೆ ಒಪ್ಪಿಕೊಳ್ಳಲು ಆತಂಕವಾಯಿತು. ಅವಳು ನೋಡಲು ಕಪ್ಪಾಗಿದ್ದರೂ ಅವಳ ಮನಸ್ಸು ಜೇನಿನಂತೆ ಸಿಹಿ, ಹಾಲಿನಂತೆ ಬಿಳಿಯಾಗಿತ್ತು .ಅವಳ ಈ ಗುಣಕ್ಕೆ ಮನಸೋತು ನಾನವಳ ದಾಸನಾಗಲು ಹೊರಟೆ, ಆದರೆ  ಕೊನೆಗೆ ಅವಳು ನನ್ನನ್ನು ಸ್ವೀಕರಿಸಲು ಸಿದ್ಧವಿಲ್ಲ ಎನ್ನುವಂತೆ ನಿರಾಕರಿಸಿದಳು. ನನಗೆ ಆಶ್ಚರ್ಯ. ಅವಳಾಗಿಯೇ  ಅರಸಿ ಬಂದವಳು ಅವಳಾಗಿಯೇ ತಿರಸ್ಕರಿಸುತ್ತಿದ್ದಾಳೆ ಎಂದು, ಅದಕ್ಕೆ ಅವಳು ಕೊಟ್ಟ ಕಾರಣ  ಕೇಳಿದಾಗ ನಾನು ಬೆಚ್ಚಿ ಬಿದ್ದೆ.

“ಈ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಬರುವುದು ಸಹಜ, ಆದರೆ ಅದರ ಬಲೆಗೆ ಸಿಲುಕದೆ ನಿನ್ನ ವಿದ್ಯಾಭ್ಯಾಸದ ಕಡೆಗೆ  ಗಮನಕೊಟ್ಟು ನಿನ್ನ ತಂದೆ ತಾಯಿಯ ಆಸೆ-ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ತಲ್ಲೀನನಾಗು, ನನ್ನ ಬಗ್ಗೆ ನಿಂಗೆ ಯೋಚನೆ ಬೇಡ ಎಂದು ರೇಗಿ ಬಿಟ್ಟಳು.  ಆದರೆ ಅಂದು ಅವಳೇ ನನ್ನ ಬಾಳ ಸಂಗಾತಿಯೆಂದು ತೀರ್ಮಾನಿಸಿದೆ. ಇದಕ್ಕೆ ಕಾರಣ ಇವತ್ತಿನ ಕಾಲದಲ್ಲಿ ಲವ್ ಲವ್ ಎಂದು ತಮ್ಮ ತಂದೆ ತಾಯಿಯನ್ನು ಬಿಟ್ಟು ಹೋಗುವವರಿಗೆ ಅವಳು ಮಾದರಿಯಂತೆ ಕಂಡಿದ್ದಳು. ಹೀಗೆ ಅವಳ ಮನಸ್ಸು ಗೆಲ್ಲಬೇಕೆಂದು ತಿರ್ಮಾನಿಸಿದೆ. ಕೊನೆಗೂ ಆಕೆಯ ಮನಸ್ಸು ಗೆದ್ದು ಸಂತೋಷಗೊಂಡಿದ್ದೇನೆ. ಈಗ ಅವಳೇ ನನ್ನ ಮನದರಸಿ.

ಇಫಾಜ್ ಪತ್ರಿಕೋದ್ಯಮ ವಿಭಾಗ, ಎಂ.ಪಿ.ಎಂ.ಕಾಲೇಜು,ಕಾರ್ಕಳ