ದೇವಸ್ಥಾನ ಒಡೆಯುವ ಮೂಲಕ ಬಿಜೆಪಿಯ ನಿಜಬಣ್ಣ ಬಯಲು: ಶುಭದ ರಾವ್ ಟೀಕೆ

ಕಾರ್ಕಳ: ಹಿಂದುಗಳ ಧಾರ್ಮಿಕ‌ ನಂಬಿಕೆಗಳಾದ ದೇವರು, ದೇವಸ್ಥಾನ, ಗೋವು ಮೊದಲಾದ ವಿಚಾರಗಳನ್ನೇ ತನ್ನ ರಾಜಕೀಯ‌ ಬಂಡವಾಳವಾಗಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ದೇವಸ್ಥಾನವನ್ನೇ ಕೆಡವುದರ ಮೂಲಕ ತನ್ನ ಅವಕಾಶವಾದಿ ರಾಜಕಾರಣವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಟೀಕಿಸಿದ್ದಾರೆ.

ಜನಪರ ಆಡಳಿವನ್ನು ನೀಡಿ ಜನರ ವಿಶ್ವಾಸವನ್ನು ಗಳಿಸಲಿಲ್ಲ, ಕೊನೆ ‌ಪಕ್ಷ ಹಿಂದೂಗಳ ನಂಬಿಕೆಯ ಪ್ರತೀಕವಾದ ದೇವಸ್ಥಾನವನ್ನೂ ಉಳಿಸಲಿಲ್ಲ. ಯಾರಿಗೂ ಸಮಸ್ಯೆ ಇಲ್ಲದ  ಪುರಾತನ ದೇವಸ್ಥಾನ ಒಡೆಯುವ ಅನಿವಾರ್ಯತೆ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

ಕಾರ್ಕಳ ಕ್ಷೇತ್ರದಾದ್ಯಂತ ಗೋಕಳ್ಳರ ಹಾವಳಿ ಮಿತಿ ಮೀರಿದೆ. ಬಡ ಕುಟುಂಬಕ್ಕೆ ಆಧಾರದವಾಗಿದ್ದ ಬೆಲೆಬಾಳುವ ದನಗಳನ್ನು ತಲವಾರು ತೋರಿಸಿ ಹಟ್ಟಿಯಿಂದಲೇ ಕದಿಯಲಾಗುತ್ತದೆ ಎಂದು ರೈತರು, ಸಂಘಟನೆಯವರು ಎಷ್ಟೇ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲ. ಬೇರೆ ಪಕ್ಷ ‌ಆಡಳಿತ ನಡೆಸುವ ಸಂದರ್ಭ ರಸ್ತೆಯಲ್ಲಿ ಹೋರಳಾಡುತ್ತಿದ್ದವರು ನಾಪತ್ತೆಯಾಗಿದ್ದಾರೆ. ದೂರದ ಅಫ್ಘಾನಿಸ್ತಾನದ ಬಗ್ಗೆ ಹೇಳಿಕೆಯನ್ನು ನೀಡುವ‌ ಸಚಿವರು ತಮ್ಮದೇ ಆಡಳಿತ ಅವಧಿಯಲ್ಲಿ ಇಷ್ಟೇಲ್ಲಾ ಆದರೂ ಮೌನವಹಿಸಿರುವುದು ವಿಷಾದನೀಯ ಎಂದು ಶುಭದ್ ತಿಳಿಸಿದ್ದಾರೆ.