ಚುನಾವಣಾ ಪ್ರಚಾರ ರಂಗೇರುತ್ತಿದ್ದಂತೆ, ಚುನಾವಣೆಯ ಅಖಾಡಕ್ಕಿಳಿದಿರುವ ಅಭ್ಯರ್ಥಿಗಳ ಕುರಿತು ಶೋಧಿಸುವ ಕಾರ್ಯ, ಅವರ ಸಾಧನೆಗಳ ಮೈಲುಗಲ್ಲುಗಳ, ಭರವಸೆಯ ಮಾತುಗಳನ್ನು ಮತದಾರರ ಎದುರು ಬಿಚ್ಚಿಡುವ ಕೆಲಸವೂ ರಂಗು ಪಡೆಯುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಹೊಸಬರಿಗೆ ಟಿಕೆಟ್ ನೀಡುವ ಮೂಲಕ ಹೊಸ ಪರೀಕ್ಷೆಗೆ ಸಜ್ಜಾಗುತ್ತಿದೆ.
ಸುರೇಶ್ ಶೆಟ್ಟಿ ಅವರ ಬಗ್ಗೆ:
ಸಮಾಜ ಸೇವಕರಾಗಿರುವ ಸುರೇಶ ಶೆಟ್ಟಿ ಗುರ್ಮೆ ಅವರು ಒಬ್ಬ ಮಾದರಿ ರಾಜಕಾರಣಿ ಎಂದೇ ಹೇಳಬಹುದಾಗಿದೆ. ರಾಜಕೀಯ ಮಾತ್ರವಲ್ಲದೇ ಉತ್ತಮ ವಾಕ್ಚಾತುರ್ಯ ಹೊಂದಿರುವ ಈತ ತಮ್ಮ ಭಾಷಣದ ಮೂಲಕ ಜನರಲ್ಲಿ ಧಾರ್ಮಿಕ ಜಾಗೃತಿ, ಸಾಮಾಜಿಕ ಜಾಗೃತಿ ಮೂಡಿಸಿ ಜೀವನಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿರುತ್ತಾರೆ. ಅವರು ಈ ಬಾರಿ ಕಾಪು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬುದು ಗಮನಾರ್ಹ ವಿಚಾರ. ಅಲ್ಲದೇ, ಕಾಪು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ವರ್ಗದ ದೊಡ್ಡ ಪ್ರಮಾಣದ ಮತಗಳು ಇವರಿಗೆ ದೊರಕುವ ಸಂಭವವಿದೆ ಎಂದು ಹೆಚ್ಚಿನವರ ಅನಿಸಿಕೆ. ಇದಕ್ಕಿರುವ ಕಾರಣಗಳು ಹಲವಾರು.
ಇವರ ಶೈಕ್ಷಣಿಕ ವಿದ್ಯಾರ್ಹತೆ ನೋಡುವುದಾದರೆ ಇವರು ಬಿ.ಕಾಂ ಪದವೀಧರರಾಗಿದ್ದು, ಓದಿನ ನಂತರ ಬಳ್ಳಾರಿಯಲ್ಲಿ ಔದ್ಯೋಗಿಕ ಹಾಗೂ ಉದ್ಯಮರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ವಾಗ್ಮಿ ಮಾತ್ರವಲ್ಲದೇ ಸಮಾಜ ಸೇವೆಯ ಧ್ಯೇಯ ಹೊಂದಿರುವ ಇವರು, ಅಶಕ್ತರಿಗೆ, ಬಡವರಿಗೆ ಕೈಲಾದ ಸಹಾಯವನ್ನು ಮಾಡುವ ಗುಣ ರೂಢಿಸಿಕೊಂಡಿದ್ದಾರೆ. ಕೊರೊನಾ ಕಾಲದಲ್ಲಿ ಇವರ ಸೇವೆ ಗಮನಾರ್ಹ. ಸೋಂಕಿನ ತೀವ್ರತೆಯ ನಡುವೆಯೂ ಯಾವುದೇ ಜಾತಿ, ಧರ್ಮದ ಭೇದ ಭಾವ ಇಲ್ಲದೆ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಬಡ ಹಾಗೂ ಸಂಕಷ್ಟದಲ್ಲಿದ್ದವರಿಗೆ ಸಹಾಯ ನೀಡಿದ್ದರು. ಇವರ ಈ ಸೇವೆಯೇ ಈ ಬಾರಿ ಚುನಾವಣೆಯಲ್ಲಿ ಗೆಲುವನ್ನು ಪಡೆಯಲು ಸಹಕರಿಸುವ ಸಾಧ್ಯತೆ ಇದೆ ಎಂದು ಎಲ್ಲರ ಅಭಿಮತ.
ಗೆಲುವಿನ ಸಾಧ್ಯತೆಯ ಗುಟ್ಟುಗಳೇನು?
ಸುರೇಶ್ ಶೆಟ್ಟಿ ಅವರು ಗುರ್ಮೆ ಫೌಂಡೇಶನ್ ಟ್ರಸ್ಟ್ ಎಂಬ ಸಂಸ್ಥೆಯ ಮೂಲಕ, ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಹಾಗೂ ನಡೆಸುತ್ತಿದ್ದಾರೆ. ಈ ಟ್ರಸ್ಟ್ನ ಸಹಾಯದಿಂದಲೇ ಹಲವು ಜನ ತಮ್ಮ ಬದುಕಿನ ಹಲವಾರು ಸಂಕಷ್ಟಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ. ತಮ್ಮ ಜೀವನದ ಅಮೂಲ್ಯ ಘಳಿಗೆಗಳಿಗೆ ಸಾಕ್ಷಿಯಾಗಿದ್ದಾರೆ. ಇವರು ತಮ್ಮ ಸಂಸ್ಥೆಯ ಮೂಲಕ ರಕ್ತದಾನ, ಆರೋಗ್ಯ ಶಿಬಿರ ಮುಂತಾದವುಗಳನ್ನು ಆಯೋಜಿಸಿ ಜನರಿಗೆ ಮಾಡಿದ ಸಹಾಯ ಶ್ಲಾಘನೀಯ. ತಾಯಿಯ ಆಸೆಯಂತೆ ಮನೆಯಲ್ಲೇ ಗೋಶಾಲೆ ಆರಂಭಿಸಿ ಹಲವು ತಳಿಗಳ ಗೋವುಗಳನ್ನು ಸಾಕುತ್ತಿದ್ದಾರೆ. ಇದರ ಜೊತೆಗೆ ಗೋವಿಹಾರ ಕಾರ್ಯಕ್ರಮದ ಮೂಲಕ ಜನರಲ್ಲಿ ಗೋವಿನ ಬಗ್ಗೆ ಕಾಳಜಿ ಹಾಗೂ ಜಾಗೃತಿ ಮೂಡುವಲ್ಲಿ ಕಾರಣೀಭೂತರಾಗಿದ್ದಾರೆ.
ರಾಜಕೀಯ ಪ್ರಪಂಚ:
2013 ರಲ್ಲಿ ಕಾಪು ಕ್ಷೇತ್ರದಲ್ಲಿ ಕಾಂಗ್ರೆಸ್ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ವಿನಯ್ ಕುಮಾರ್ ಸೊರಕೆ ಮತ್ತು ಸುರೇಶ್ ಗುರ್ಮೆ ಅವರ ನಡುವೆ ಟಿಕೆಟ್ಗಾಗಿ ಬಾರೀ ಪೈಪೋಟಿ ಉಂಟಾಗಿತ್ತು. ಆದರೆ ಕಡೆ ಕ್ಷಣದಲ್ಲಿ ಗುರ್ಮೆ ಅವರಿಗೆ ಟಿಕೆಟ್ ಕೈತಪ್ಪಿತ್ತು. ಮಾತ್ರವಲ್ಲದೆ ಮೂಲಗಳ ಪ್ರಕಾರ ಸುರೇಶ್ ಶೆಟ್ಟಿ ಅವರಿಗೆ ಕಳೆದ ಬಾರಿಯೇ ಕಾಪು ಕ್ಷೇತ್ರದಿಂದಲೇ ಬಿಜೆಪಿ ಟಿಕೆಟ್ ಸಿಗುವುದರಲ್ಲಿತ್ತು.
ಆದರೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು. 2013 ರಲ್ಲಿ ಬಿಜೆಪಿ ಸೇರಿದ ಇವರು ಪಕ್ಷ ಸಂಘಟನೆ ಹಾಗೂ ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು ಮಾತ್ರವಲ್ಲದೇ ಕಳೆದ ಬಾರಿ ಪ್ರಚಾರ ಸಮಿತಿಯ ಮುಖ್ಯಸ್ಥ ಸ್ಥಾನವನ್ನೂ ಅಲಂಕರಿಸಿದ್ದರು. ಇವರ ಪಕ್ಷನಿಷ್ಠೆಗೆ ಉದಾಹರಣೆಯೆಂದರೆ, ಕಳೆದ ಬಾರಿ ಟಿಕೇಟ್ ಕೈ ತಪ್ಪಿದ್ದರೂ ಕೂಡಾ ಬೇಸರಿಸದೆ ಶ್ರಮಪಟ್ಟು ಲಾಲಾಜಿ ಮೆಂಡನ್ ಗೆಲುವಿಗೆ ಕಾರಣರಾಗಿದ್ದರು. ಇವರು ಪಕ್ಷಕ್ಕೆ ಸಲ್ಲಿಸಿರುವ ಸೇವೆಯ ಫಲವಾಗಿಯೇ ಈ ಬಾರಿ ಅವರಿಗೆ ಕಾಪು ಕ್ಷೇತ್ರದಿಂದ ಟಿಕೇಟ್ ಸಿಕ್ಕಿದೆ.
ಸುರೇಶ್ ಶೆಟ್ಟಿ ಗುರ್ಮೆ ಅವರ ಸಾಧನೆ, ಸಹಾಯ ಪ್ರವೃತ್ತಿ, ಮಾನವೀಯ ಮೌಲ್ಯ, ಜನ ಸಾಮಾನ್ಯರ ಕಷ್ಟಗಳನ್ನು ಅರ್ಥೈಸಿಕೊಳ್ಳುವ ಗುಣ ಇವುಗಳೇ ಇವರಿಗೆ ಗೆಲ್ಲಲು ಇರುವ ದೊಡ್ಡ ಕೊಂಡಿಗಳು. ರಾಜಕೀಯಕ್ಕಿಂತ ಹೆಚ್ಚಾಗಿ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದ ಗುರ್ಮೆಯಂತಹವರು ಶಾಸಕರಾಗಿ ಆಯ್ಕೆಯಾದರೆ ಕ್ಷೇತ್ರದ ಜನತೆಗೆ ಭೇದವಿಲ್ಲದಂತೆ ಸಹಾಯ, ಸಹಕಾರ ಲಭಿಸುವುದು ಖಚಿತ ಎಂದೇ ಹೇಳಲಾಗುತ್ತಿದೆ.