ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿಕೆ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಿದ ಭಾರತೀಯ ಜನತಾ ಪಕ್ಷ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಭಾರೀ ರಾಜಕೀಯ ಬಿರುಗಾಳಿ ಎಬ್ಬಿಸಿರುವ ‘ಕರ್ನಾಟಕದ ಸಾರ್ವಭೌಮತ್ವ’ ಕುರಿತು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ನೀಡಿದ ಹೇಳಿಕೆ ವಿರುದ್ಧ ಭಾರತೀಯ ಜನತಾ ಪಕ್ಷ ಸೋಮವಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಶನಿವಾರದಂದು ಸೋನಿಯಾ ಗಾಂಧಿ ಅವರು ಕರ್ನಾಟಕದ ಹುಬ್ಬಳ್ಳಿ ಜಿಲ್ಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಪೋಸ್ಟ್ ಈ ಬಗ್ಗೆ ಪೋಸ್ಟ್ ಮಾಡಿ, “ಸಿಪಿಪಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಜಿ 6.5 ಕೋಟಿ ಕನ್ನಡಿಗರಿಗೆ ಬಲವಾದ ಸಂದೇಶವನ್ನು ಕಳುಹಿಸಿದ್ದಾರೆ: “ಕರ್ನಾಟಕದ ಪ್ರತಿಷ್ಠೆ, ಸಾರ್ವಭೌಮತ್ವ ಅಥವಾ ಸಮಗ್ರತೆಗೆ ಧಕ್ಕೆ ತರಲು ಕಾಂಗ್ರೆಸ್ ಯಾರಿಗೂ ಅವಕಾಶ ನೀಡುವುದಿಲ್ಲ.” ಎಂದಿತ್ತು. ಈ ಬಗ್ಗೆ ವಿವಾದವೆದ್ದಿದ್ದು, ಬಿಜೆಪಿ ಈ ಹೇಳಿಕೆಯನ್ನು ಖಂಡಿಸಿದೆ.

Image

ಇದರ ವಿರುದ್ದ ಬಿಜೆಪಿಯ ನಿಯೋಗ ರಾಷ್ಟ್ರ ರಾಜಧಾನಿಯಲ್ಲಿರುವ ಚುನಾವಣಾ ಸಮಿತಿ ಕಚೇರಿಗೆ ತೆರಳಿದೆ. “ಸೋನಿಯಾ ಗಾಂಧಿ ಉದ್ದೇಶಪೂರ್ವಕವಾಗಿ ಸಾರ್ವಭೌಮತ್ವ ಪದವನ್ನು ಬಳಸಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯೇ ‘ತುಕ್ಡೆ-ತುಕ್ಡೆ’ ಗ್ಯಾಂಗ್‌ನ ಅಜೆಂಡಾ ಆದ್ದರಿಂದ ಅವರು ಅಂತಹ ಪದಗಳನ್ನು ಬಳಸುತ್ತಿದ್ದಾರೆ. ಈ ದೇಶವಿರೋಧಿ ಕೃತ್ಯದ ವಿರುದ್ಧ ಆಯೋಗ ಕ್ರಮ ಕೈಗೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ನಾವು ಸೋನಿಯಾ ಗಾಂಧಿ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಹುಬ್ಬಳ್ಳಿಯಲ್ಲಿ ಭಾಷಣ ಮಾಡಿದ ಅವರು ಕರ್ನಾಟಕದ ಸಾರ್ವಭೌಮತ್ವದ ಬಗ್ಗೆ ಮಾತನಾಡಿದ್ದಾರೆ. ನಾವು ದೇಶಕ್ಕಾಗಿ ಸಾರ್ವಭೌಮತ್ವ ಪದವನ್ನು ಬಳಸುತ್ತೇವೆ. ಅವರು ‘ತುಕ್ಡೆ-ತುಕ್ಡೆ’ ಗ್ಯಾಂಗ್‌ನ ಮುಖ್ಯಸ್ಥರಾಗಿದ್ದಾರೆ. ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಒತ್ತಾಯಿಸಿದ್ದೇವೆ ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಹೇಳಿದ್ದಾರೆ.