ಕಾಪು ಮಂಡಲ ಯುವ ಮತ್ತು ಮಹಿಳಾ ಮೋರ್ಚಾದಿಂದ ಜನಸಂಕಲ್ಪ ಸಮಾವೇಶ ಪೂರ್ವಭಾವಿ ಸಭೆ

ಉಡುಪಿ: ನ.7ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ನೇತೃತ್ವದಲ್ಲಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ‘ಜನಸಂಕಲ್ಪ ಸಮಾವೇಶ’ವು ಅತ್ಯಂತ ಮಹತ್ವಪೂರ್ಣವಾಗಿದ್ದು ಬಿಜೆಪಿ ಯುವ ಮೋರ್ಚಾ, ಮಹಿಳಾ ಮೋರ್ಚಾ ಸಹಿತ ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಸಂಘಟಿತರಾಗಿ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಸಾರ್ವಜನಿಕ ಬಂಧುಗಳು ಗರಿಷ್ಠ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬದ್ಧತೆಯಿಂದ ಶ್ರಮವಹಿಸಿ, ಸಮಾವೇಶವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಕಾಪು ಮಂಡಲಾಧ್ಯಕ್ಷ ಶ್ರೀಕಾಂತ ನಾಯಕ್ ಹೇಳಿದರು.

ಅವರು ಗುರುವಾರದಂದು ಬಿಜೆಪಿ ಕಾಪು ಮಂಡಲ ಕಚೇರಿಯಲ್ಲಿ ನಡೆದ ಯುವ ಮೋರ್ಚಾ ಮತ್ತು ಮಹಿಳಾ ಮೋರ್ಚಾ ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಾಗಲೇ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾರ್ಗದರ್ಶನದಲ್ಲಿ ವಿವಿಧ ಜವಾಬ್ದಾರಿಗಳ ನಿರ್ವಹಣೆಯನ್ನು ನಿಗದಿತ ತಂಡಗಳಿಗೆ ವಹಿಸಲಾಗಿದೆ. ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಕ್ರಿಯಾಶೀಲತೆಯಿಂದ ಕರ್ತವ್ಯದಲ್ಲಿ ತೊಡಗಿಸಿಕೊಂಡು ಜನಸಂಕಲ್ಪ ಸಮಾವೇಶವನ್ನು ಯಶಸ್ವಿಗೊಳಿಸಲು ಕೈಜೋಡಿಸಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಕಾಪು ಮಂಡಲ ಪ್ರಧಾನ‌ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಕಾಪು ಯುವ ಮೋರ್ಚಾ ಅಧ್ಯಕ್ಷ ಸಚಿನ್ ಸುವರ್ಣ, ಕಾಪು ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಾ ಶೆಟ್ಟಿ ಹಾಗೂ ಕಾಪು ಮಂಡಲ ಪದಾಧಿಕಾರಿಗಳು ಮತ್ತು ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.