ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನಾಳೆ (ನ. 27) ಬೆಳಿಗ್ಗೆ 11ಗಂಟೆಗೆ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಹಾಗೂ ಮಧ್ಯಾಹ್ನ 2.30ಕ್ಕೆ ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ನಲ್ಲಿ ‘ಗ್ರಾಮ ಸ್ವರಾಜ್ಯ ಸಮಾವೇಶ’ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಉಡುಪಿ ಬಿಜೆಪಿ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಉಡುಪಿ ಗ್ರಾಮಾಂತರ, ಕುಂದಾಪುರ, ಬೈಂದೂರು ಮಂಡಲಗಳಿಗೆ ಸಂಬಂಧಿಸಿದಂತೆ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಸಮಾವೇಶ ನಡೆಯಲಿದೆ. ಉಡುಪಿ ನಗರ, ಕಾಪು, ಕಾರ್ಕಳ ಮಂಡಲಗಳಿಗೆ ಸಂಬಂಧಿಸಿದಂತೆ ಅಂಬಾಗಿಲಿನ ಅಮೃತ್ ಗಾರ್ಡನ್ ನಲ್ಲಿ ಸಮಾವೇಶ ಜರಗಲಿದೆ ಎಂದರು.
ಮಂಗಳೂರು ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮಾವೇಶವನ್ನು ಉದ್ಘಾಟಿಸುವರು. ಅವರು ಸಮಾವೇಶಕ್ಕೂ ಮೊದಲು ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.
ಸಮಾವೇಶದಲ್ಲಿ ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಶಂಕರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಹಾಗೂ ಜಿಲ್ಲೆಯ ಶಾಸಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆಗೆ ಪೂರ್ವಭಾವಿಯಾಗಿ ಈ ಸಮಾವೇಶ ಆಯೋಜಿಸಲಾಗಿದೆ. ಜಿಲ್ಲೆಯ 154 ಗ್ರಾಮ ಪಂಚಾಯತ್‌ಗಳ ಪೈಕಿ 98 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತ ಆಡಳಿತವಿದೆ. ಮುಂದಿನ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕುಟುಂಬ ಮಿಲನ ಕಾರ್ಯಕ್ರಮಗಳ ಜೊತೆಗೆ ಪಂಚರತ್ನ ಸಮಿತಿ ಹಾಗೂ ಪೇಜ್ ಪ್ರಮುಖರ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಪ್ರಕೋಷ್ಠದ ಸಂಚಾಲಕ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.