ಬಿಜೆಪಿ ರಾಷ್ಟ್ರೀಯ ಪ್ರಧಾನ‌ ಕಾರ್ಯದರ್ಶಿ ಸಿ.ಟಿ. ರವಿ ಅವರಿಂದ ದಿ. ಡಾ. ಬನ್ನಂಜೆ ಗೋವಿಂದಾಚಾರ್ಯರ ಮನೆಗೆ ಭೇಟಿ

ಉಡುಪಿ: ಬಿಜೆಪಿ ರಾಷ್ಟ್ರೀಯ ಪ್ರಧಾನ‌ ಕಾರ್ಯದರ್ಶಿ ಸಿ.ಟಿ. ರವಿ ಇಂದು ಈಚೆಗೆ ಇಹಲೋಕ ತ್ಯಜಿಸಿದ ಹಿರಿಯ ವಿದ್ವಾಂಸ ಡಾ. ಬನ್ನಂಜೆ ಗೋವಿಂದಾಚಾರ್ಯರ ಮನೆಗೆ ಭೇಟಿ ನೀಡಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಆಚಾರ್ಯರ ಮನೆಯವರೊಂದಿಗೆ ಸ್ವಲ್ಪ ಹೊತ್ತು ಮಾತುಕತೆ ನಡೆಸಿ ಆಚಾರ್ಯರ ಕೊಡುಗೆಗಳನ್ನು ಸ್ಮರಿಸಿಕೊಂಡರು. ಬಹಳ ವರ್ಷಗಳ ಹಿಂದೆ ದಿನ ಪತ್ರಿಕೆಯೊಂದರಲ್ಲಿ *ಕಿಷ್ಕಿಂಧಾ ಕಾಂಡ* ಎಂಬ ಅಂಕಣ ಬರಹದ ಮೂಲಕ ರಾಜಕೀಯದ ಪರಿಸ್ಥಿತಿಯನ್ನು ಅವಲೋಕಿಸಿ ತಮ್ಮ ವ್ಯಂಗ್ಯ ವಿಡಂಬನೆಯಿಂದ ಕೂಡಿದ ಚಿಂತನೆಗಳ ಮೂಲಕ ರಾಜಕಾರಣಿಗಳಿಗೆ ಚಾಟಿ ಏಟು ಬೀಸಿ ಮಾರ್ಗದರ್ಶನ ಮಾಡುತ್ತಿದ್ದುದನ್ನು ನೆನಪಿಸಿಕೊಂಡರು.

ಆಚಾರ್ಯರ ಲೇಖನಗಳಿಂದ ಸಾಕಷ್ಟು ಪ್ರಭಾವಿತನಾಗಿದ್ದೇನೆ. ಅವರ ಸಾಹಿತ್ಯ ಸೇವೆ ಅಮೋಘವಾದುದು. ಅವರ ಆತ್ಮಕ್ಕೆ ದೇವರು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು. ಈ ವೇಳೆ ಶಾಸಕ ಕೆ. ರಘುಪತಿ ಭಟ್ ಉಪಸ್ಥಿತರಿದ್ದರು..