ಕಾರ್ಕಳ ಪುರಸಭೆ ಬಿಜೆಪಿ ತೆಕ್ಕೆಗೆ: ಅಧ್ಯಕ್ಷರಾಗಿ ಸುಮಾ, ಉಪಾಧ್ಯಕ್ಷರಾಗಿ ಪಲ್ಲವಿ ಆಯ್ಕೆ

ಕಾರ್ಕಳ: ಕಾರ್ಕಳ ಪುರಸಭೆ ಕೊನೆಗೂ ಬಿಜೆಪಿ ತೆಕ್ಕೆಗೆ ಒಲಿದಿದ್ದು, ಅಧ್ಯಕ್ಷರಾಗಿ ಬಿಜೆಪಿಯ ಸುಮಾ, ಉಪಾಧ್ಯಕ್ಷರಾಗಿ ಪಲ್ಲವಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಆದರೆ ಕಡೆಗೂ ಪುರಸಭೆ ಬಿಜೆಪಿ ಪಾಲಾಗಿದೆ. ಒಟ್ಟು 23 ಸದಸ್ಯ ಬಲ ಹೊಂದಿರುವ ಕಾರ್ಕಳ ಪುರಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ತಲಾ 11, ಪಕ್ಷೇತರ 1 ಸ್ಥಾನದಲ್ಲಿ ಗೆಲುವು ಕಂಡಿದ್ದರು. ಆದರೆ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕ ಹಾಗೂ ಸಂಸದರಿಗೂ ಮತದಾನ ಮಾಡಲು ಅವಕಾಶ ಇರುವುದರಿಂದ ಕಾರ್ಕಕ ಬಿಜೆಪಿ ಶಾಸಕ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಬಿಜೆಪಿ ಪರ ಮತ ಚಲಾಯಿಸಿದರು.

ಶ್ರೀನಿವಾಸ ನಗರ ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಲಕ್ಷ್ಮೀನಾರಾಯಣ ಮಲ್ಯ ಅವರು ಮತದಾನ ಮಾಡದೆ ತಟಸ್ಥರಾಗಿ ಉಳಿದರು. ಇದರಿಂದ ಬಿಜೆಪಿ ಅಭ್ಯರ್ಥಿಗಳು ಸುಲಭವಾಗಿ ಗೆಲುವು ಸಾಧಿಸಿದರು. ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ನಳಿನಿ ಆಚಾರ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಭಾ ಸ್ಪರ್ಧೆ ನಡೆಸಿದ್ದರು.