ಬೈಂದೂರು ಶಾಸಕರಿಂದ ನಿತ್ಯ ಕಿರುಕುಳ, ಬೆದರಿಕೆ: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಆರೋಪ

ಕುಂದಾಪುರ: ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು ನನಗೆ ಹಾಗೂ ನನ್ನ ಕುಟುಂಬಕ್ಕೆ ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ದೂರವಾಣಿ ಕರೆ ಮಾಡಿ ಕುಟುಂಬವನ್ನು ಬೀದಿಗೆ ತರುತ್ತೇನೆಂಬ ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಗಂಭೀರ ಆರೋಪ ಮಾಡಿದ್ದಾರೆ.

ಅವರು ಇಂದು ಪತ್ನಿ ರೇಷ್ಮಾ, ತಾಯಿ ನೀಲಾವತಿ ಹಾಗೂ ಮೂವರು ಮಕ್ಕಳ‌ ಜೊತೆಗೆ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನ ಮೇಲೆ ಸುಳ್ಳು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದಾರೆ. ನಾನು ಯಾವುದೇ ಚೆಕ್ ನೀಡಿ ಶಾಸಕರಿಂದ ಹಣ ಪಡೆದಿಲ್ಲ. ಆದರೆ, ಶಾಸಕರು ನಾನು ಹಣದ ವ್ಯವಹಾರಕ್ಕೆ ಬೇರೆಯವರ ಬಳಿ ಇಟ್ಟಿದ್ದ ಒಂದು ಖಾಲಿ ಚೆಕ್ಕನ್ನು ಪಡೆದುಕೊಂಡು, ನನ್ನ ವಿರುದ್ಧ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದಾರೆ ಎಂದು ದೂರಿದ್ದಾರೆ.

ಪ್ರಮಾಣಕ್ಕೆ ಬರಲಿ:
ನಾನು ಶಾಸಕರಿಂದ ಚೆಕ್ ನೀಡಿ ಹಣ ಪಡೆದಿಲ್ಲ. ಒಂದು ವೇಳೆ ನಾನು ಮಾಡುವ ಆರೋಪ ಸುಳ್ಳಾದರೆ ಶಾಸಕರು ಮೂಕಾಂಬಿಕೆಯ ದೇಗುಲದಲ್ಲಿ ಸತ್ಯ ತೀರ್ಮಾನಕ್ಕೆ ಬರಲಿ. ನಾನು ಆಣೆ ಪ್ರಮಾಣ ಮಾಡಲು ಸಿದ್ಧ ಎಂದು ಅವರು ಸವಾಲು ಹಾಕಿದರು.

2018ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕ್ಷೇತ್ರದಲ್ಲಿ ಮಟ್ಕಾ, ಜುಗಾರಿ, ಇಸ್ಫೀಟ್ ದಂಧೆ ನಿಲ್ಲಿಸುತ್ತೇನೆಂದು ಶಾಸಕರು ಭರವಸೆ ಕೊಟ್ಟಿದ್ದರು. ಆದರೆ, ಅವರು ಶಾಸಕರಾದ ಬಳಿಕ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಈ ಬಗ್ಗೆ ಮಾಹಿತಿ ನೀಡಿದಾಗ ನನ್ನ ವಿರುದ್ಧ ಹರಿಹಾಯ್ದರು. ಆ ಬಳಿಕ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ನಾಲ್ಕೈದು ಚೆಕ್ ಬೌನ್ಸ್ ಕೇಸ್ ಹಾಕಿಸಿದರು. ಅವರ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರನ್ನು ಸಂಪೂರ್ಣ ಕಡೆಗಣಿಸಿದ್ದು, ಪ್ರಶ್ನಿಸಿದ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಬಾಯಿಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ತಾಯಿ ಲೀಲಾವತಿ ಮಾತನಾಡಿ, ನನ್ನ ಮಗನನ್ನು ಬಲಗೈ ಬಂಟ, ತಮ್ಮ ಎಂದು ಹೊಗಳಿದ್ದ ಶಾಸಕ ಸುಕುಮಾರ ಶೆಟ್ಟಿ ಇದೀಗ ಇಡೀ ಕುಟುಂಬವನ್ನು ತಂದು ನಿಲ್ಲಿಸಿದ್ದಾರೆ. ನಿರಂತರ ಕಿರುಕುಳ ಹಾಗೂ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಣ್ಣೀರು ಹಾಕಿದರು.
ಇದೇ ರೀತಿ ಶಾಸಕರ ಕಿರುಕುಳ ಮುಂದುವರಿದರೆ ಅವರ ಹೆಸರು ಬರೆದಿಟ್ಟು ಇಡೀ ಕುಟುಂಬ ಸಾಮೂಹಿಕವಾಗಿ‌ ಅವರ ಮನೆಯ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಪತ್ನಿ ರೇಷ್ಮಾ ಎಚ್ಚರಿಕೆ ನೀಡಿದರು.