ಚಂಡೀಗಢದ ಮೇಯರ್ ಚುನಾವಣೆ: ಬಿಜೆಪಿ ಅಭ್ಯರ್ಥಿ ಗೆಲುವು; ಇಂಡಿಯಾ ಬಣಕ್ಕೆ ಸೋಲು

ನವದೆಹಲಿ: ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮನೋಜ್ ಸೋಂಕರ್ ಗೆಲುವು ಸಾಧಿಸಿದ್ದು ‘ಇಂಡಿಯಾ’ ಬಣಕ್ಕೆ ಸೋಲುಂಟಾಗಿದೆ.

ಚಂಡೀಗಢದಲ್ಲಿ ಮಂಗಳವಾರ ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಮನೋಜ್ ಸೋಂಕರ್ ಅವರು ಎಎಪಿಯ ಕುಲದೀಪ್ ಕುಮಾರ್ ಅವರನ್ನು ಸೋಲಿಸಿದರು.

ಎಎಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು.

ಮನೋಜ್ ಸೋಂಕರ್ 16 ಮತಗಳನ್ನು ಪಡೆದರೆ, ಕುಮಾರ್ 12 ಮತಗಳನ್ನು ಪಡೆದರು. ಎಂಟು ಮತಗಳು ಅಸಿಂಧುವಾಗಿವೆ. ಹೊಸದಾಗಿ ಆಯ್ಕೆಯಾದ ಮೇಯರ್ ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಹುದ್ದೆಗಳಿಗೆ ಚುನಾವಣೆ ನಡೆಸಲಿದ್ದಾರೆ. ಈ ಎರಡು ಸ್ಥಾನಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

35 ಸದಸ್ಯ ಬಲದ ಚಂಡೀಗಢ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 14 ಕೌನ್ಸಿಲರ್‌ಗಳನ್ನು ಹೊಂದಿದೆ. ಎಎಪಿ 13 ಮತ್ತು ಕಾಂಗ್ರೆಸ್ ಏಳು ಕೌನ್ಸಿಲರ್‌ಗಳನ್ನು ಹೊಂದಿದೆ. ಶಿರೋಮಣಿ ಅಕಾಲಿದಳಕ್ಕೆ ಒಬ್ಬ ಕೌನ್ಸಿಲರ್‌ ಇದ್ದಾರೆ.

ಚಂಡೀಗಢದ ಮೇಯರ್ ಚುನಾವಣೆಯನ್ನು ಮೂಲತಃ ಜನವರಿ 18 ರಂದು ನಿಗದಿಪಡಿಸಲಾಗಿತ್ತು. ಆದರೆ, ಅಧ್ಯಕ್ಷರ ಅನಾರೋಗ್ಯದ ಕಾರಣ ಅವುಗಳನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿತ್ತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಜನವರಿ 30 ರಂದು ಚುನಾವಣೆ ನಡೆಸಬೇಕು ಎಂದು ಆದೇಶಿಸಿತ್ತು.

ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು ವಿಜಯಕ್ಕಾಗಿ ಪಕ್ಷದ ಪಂಜಾಬ್ ಘಟಕವನ್ನು ಶ್ಲಾಘಿಸಿದ್ದಾರೆ.

ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇದನ್ನು ಮೋಸ ಎಂದು ಬಣ್ಣಿಸಿದ್ದಾರೆ.