ಅಂಬಲಪಾಡಿ ಬಿಜೆಪಿ ಬೂತ್ ಸಶಕ್ತೀಕರಣ ಅಭಿಯಾನ

ಉಡುಪಿ: ರಾಜಕೀಯ ಪಕ್ಷದ ತಳ ಮಟ್ಟದ ಸಂಘಟನಾ ವ್ಯವಸ್ಥೆಯೇ ಬೂತ್. ನೈಜ ಮತ್ತು ನಿಷ್ಠಾವಂತ ಕಾರ್ಯಕರ್ತರ ತಂಡ ರೂಪುಗೊಳ್ಳುವ ವೇದಿಕೆಯೇ ಬೂತ್ ಸಮಿತಿ. ಬಿಜೆಪಿ ಇಂದು ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆಯಲು ಬೂತ್ ಮಟ್ಟದ ಕಾರ್ಯಕರ್ತರ ಪರಿಶ್ರಮವೇ ಕಾರಣ. ಬೂತ್ ಗೆದ್ದರೆ ಚುನಾವಣೆ ಗೆದ್ದಂತೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಹೇಳಿದರು.

ಅವರು ಬಿಜೆಪಿ ಉಡುಪಿ ನಗರದ ನೇತೃತ್ವದಲ್ಲಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಅಧ್ಯಕ್ಷತೆಯಲ್ಲಿ ಬಿಜೆಪಿ ಅಂಬಲಪಾಡಿ-ಕಡೆಕಾರ್ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ರಾಜೇಂದ್ರ ಪಂದುಬೆಟ್ಟುರವರ ನಿವಾಸದಲ್ಲಿ ಸೆ.15ರಂದು ನಡೆದ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಬೂತ್ ಸಶಕ್ತೀಕರಣ ಅಭಿಯಾನವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಪಕ್ಷ ಸಂಘಟನೆಯ ಜೊತೆಗೆ ಕಾರ್ಯಕರ್ತರಲ್ಲಿ ಸದ್ವಿಚಾರ ಮತ್ತು ರಾಷ್ಟ್ರ ಪ್ರೇಮವನ್ನು ಜಾಗೃತಗೊಳಿಸುವ ಸದುದ್ದೇಶದಿಂದ ಜಿಲ್ಲೆಯಾದ್ಯಂತ ಬಿಜೆಪಿ ಬೂತ್ ಸಶಕ್ತೀಕರಣ ಅಭಿಯಾನ ನಡೆಯುತ್ತಿದೆ. ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿಯವರಂತಹ ಶ್ರೇಷ್ಠ ನಾಯಕತ್ವ ಹೊಂದಿರುವ ಪಕ್ಷದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ನಮ್ಮೆಲ್ಲರ ಸುಯೋಗ. ಬೂತ್ ಸಶಕ್ತೀಕರಣ ಅಭಿಯಾನವು ತಳ ಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ಜೊತೆಗೆ ಮುಂಬರಲಿರುವ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ವಿಜಯ ದಾಖಲಿಸಲು ನಾಂದಿ ಹಾಡಲಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಮಾತನಾಡಿ, ಬಿಜೆಪಿ ಕಾರ್ಯಕರ್ತ ಆಧಾರಿತ ಪಕ್ಷ. ಕಾರ್ಯಕರ್ತರೇ ಪಕ್ಷದ ಜೀವಾಳ. ಪಕ್ಷ ಸಂಘಟನೆಯ ಸಹಿತ ತಳ ಮಟ್ಟದಲ್ಲಿ ಕಾರ್ಯಕರ್ತರನ್ನು ಸಕ್ರಿಯಗೊಳಿಸುವ ದೃಷ್ಠಿಯಿಂದ ಪಕ್ಷವು ಬೂತ್ ಸಶಕ್ತೀಕರಣ ಅಭಿಯಾನವನ್ನು ನೀಡಿದೆ. ಇದಕ್ಕೆ ಪೂರಕವಾಗಿ ಪಕ್ಷವು ಘೋಷಿಸಿರುವ ವಿವಿಧ ಸಂಘಟನಾತ್ಮಕ ಚಟುವಟಿಕೆಗಳನ್ನು ಬೂತ್ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಬೂತ್ ಸಮಿತಿ ಸದಸ್ಯರು ಅತ್ಯಂತ ಕ್ರಿಯಾಶೀಲತೆ ಮತ್ತು ಬದ್ಧತೆಯಿಂದ ಕಾರ್ಯಗತಗೊಳಿಸುವ ಮೂಲಕ ಬೂತ್ ಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಲು ಶ್ರಮಿಸಬೇಕು ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಜಯಂತ್ ಮಲ್ಪೆಯವರು ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಗಮ, ಧ್ಯೇಯೋದ್ದೇಶಗಳು, ಬೆಳವಣಿಗೆ ಹಾಗೂ ವಿವಿಧ ಸೇವಾ ವಿಭಾಗಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಯೋಗೀಶ್ ಶೆಟ್ಟಿ, ರಾಮರಾಜ್ ಕಿದಿಯೂರು, ಬಿಜೆಪಿ ಉಡುಪಿ ನಗರ ಉಪಾಧ್ಯಕ್ಷ ವೆಂಕಟರಮಣ ಕಿದಿಯೂರು, ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ್ ಮತ್ತು ದಿನೇಶ್ ಅಮೀನ್, ಕಾರ್ಯದರ್ಶಿ ದಯಾಶಿನಿ ಪಂದುಬೆಟ್ಟು, ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ ಪೂಜಾರಿ ಕಪ್ಪೆಟ್ಟು, ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರು, ಅಂಬಲಪಾಡಿ-ಕಡೆಕಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಶಕ್ತಿ ಕೇಂದ್ರದ ಅಧ್ಯಕ್ಷರಾದ ನಾಗರಾಜ್ ಕರ್ಕೇರ, ವಿಜಯ ಶೆಟ್ಟಿ, ಬೂತ್ ಅಧ್ಯಕ್ಷರಾದ ರಾಜೇಶ್ ಸುವರ್ಣ, ಮಹೇಂದ್ರ ಕೋಟ್ಯಾನ್, ಆಕಾಶ್ ಶೆಟ್ಟಿ, ಗಣೇಶ್ ಪೂಜಾರಿ, ಶಶಿಧರ್ ಸುವರ್ಣ, ರಾಜೀವ ಪೂಜಾರಿ, ಅಜಿತ್ ಶೆಟ್ಟಿಗಾರ್, ಬೂತ್ ಸಮಿತಿ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.