ಸ್ಮಾರ್ಟ್‌ಫೋನ್ ಟೆಂಪರ್ಡ್ ಗ್ಲಾಸ್‌ಗೂ BIS ಪ್ರಮಾಣಪತ್ರ ಕಡ್ಡಾಯ: 2027ರಿಂದ ಹೊಸ ನಿಯಮ

ನವದೆಹಲಿ: ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಳಪೆ ಗುಣಮಟ್ಟದ ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ಪ್ರೊಟೆಕ್ಟರ್‌ಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇನ್ನು ಮುಂದೆ ದೇಶದಲ್ಲಿ ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ಗಾರ್ಡ್‌ಗಳು ಹಾಗೂ ಟೆಂಪರ್ಡ್‌ ಗ್ಲಾಸ್‌ಗಳ ಮಾರಾಟಕ್ಕೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್‌ (BIS) ಗುಣಮಟ್ಟದ ಪ್ರಮಾಣಪತ್ರ ಕಡ್ಡಾಯವಾಗಲಿದೆ.

ಕೇಂದ್ರ ಸರ್ಕಾರದ ಈ ಕ್ರಮದಿಂದ ಕಳಪೆ ಗುಣಮಟ್ಟದ ಆಮದು ಉತ್ಪನ್ನಗಳ ಮೇಲೆ ನಿಯಂತ್ರಣ ಬರಲಿದ್ದು, ಗ್ರಾಹಕರಿಗೆ ಗುಣಮಟ್ಟದ ಸ್ಕ್ರೀನ್‌ ಪ್ರೊಟೆಕ್ಟರ್‌ಗಳು ದೊರೆಯುವ ನಿರೀಕ್ಷೆಯಿದೆ. ಜತೆಗೆ ದೇಶೀಯವಾಗಿ ಉತ್ಪಾದನೆ ನಡೆಸುತ್ತಿರುವ ಕಂಪನಿಗಳಿಗೂ ಉತ್ತೇಜನ ಸಿಗಲಿದೆ.

ಏಪ್ರಿಲ್‌ 1ರಿಂದ ಹೊಸ ನಿಯಮ

ಸೆಪ್ಟೆಂಬರ್‌ 21ರಂದು ಹೊರಡಿಸಲಾದ ಅಧಿಕೃತ ಅಧಿಸೂಚನೆಯಂತೆ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸರಕುಗಳ (ಕಡ್ಡಾಯ ನೋಂದಣಿ ಅವಶ್ಯಕತೆ) ಆದೇಶ, 2021ರ ವ್ಯಾಪ್ತಿಗೆ ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ಪ್ರೊಟೆಕ್ಟರ್‌ಗಳನ್ನು ಸೇರಿಸಲಾಗಿದೆ.

ಹೊಸ ಭಾರತೀಯ ಗುಣಮಟ್ಟ ಮಾನದಂಡಗಳು 2027ರ ಏಪ್ರಿಲ್‌ 1ರಿಂದ ಜಾರಿಗೆ ಬರಲಿದ್ದು, ಆ ಬಳಿಕ ನಿಗದಿತ ಮಾನದಂಡಗಳನ್ನು ಪೂರೈಸದ ಸ್ಕ್ರೀನ್‌ ಪ್ರೊಟೆಕ್ಟರ್‌ಗಳನ್ನು ಮಾರಾಟ ಮಾಡಲು ಅವಕಾಶ ಇರುವುದಿಲ್ಲ.

66ನೇ ಉತ್ಪನ್ನ ಸೇರ್ಪಡೆ

ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ಪ್ರೊಟೆಕ್ಟರ್‌ಗಳು ಕಡ್ಡಾಯ BIS ನಿಯಮದ ವ್ಯಾಪ್ತಿಗೆ ಸೇರುತ್ತಿರುವ 66ನೇ ಉತ್ಪನ್ನವಾಗಿವೆ. ಇದಕ್ಕೂ ಮುನ್ನ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಚಾರ್ಜರ್‌ಗಳು, ಎಲ್‌ಇಡಿ ಟಿವಿಗಳು, ಮೈಕ್ರೋವೇವ್‌ ಓವನ್‌ಗಳು, ಪ್ರಿಂಟರ್‌ಗಳು ಹಾಗೂ ಸೆಟ್‌ಟಾಪ್‌ ಬಾಕ್ಸ್‌ ಸೇರಿದಂತೆ ಹಲವು ಎಲೆಕ್ಟ್ರಾನಿಕ್‌ ಉತ್ಪನ್ನಗಳಿಗೆ ಗುಣಮಟ್ಟದ ಮಾನದಂಡಗಳನ್ನು ಕಡ್ಡಾಯಗೊಳಿಸಲಾಗಿತ್ತು.

₹20 ಸಾವಿರ ಕೋಟಿ ಮಾರುಕಟ್ಟೆ

2025ರ ಅಂದಾಜಿನ ಪ್ರಕಾರ ಭಾರತದಲ್ಲಿ ವರ್ಷಕ್ಕೆ 40 ಕೋಟಿಗೂ ಹೆಚ್ಚು ಟೆಂಪರ್ಡ್‌ ಗ್ಲಾಸ್‌ಗಳು ಮಾರಾಟವಾಗುತ್ತಿದ್ದು, ಈ ಮಾರುಕಟ್ಟೆಯ ಒಟ್ಟು ಚಿಲ್ಲರೆ ಮೌಲ್ಯ ಸುಮಾರು ₹20,000 ಕೋಟಿ ಎಂದು ಅಂದಾಜಿಸಲಾಗಿದೆ.

ಹೊಸ BIS ನಿಯಮ ಜಾರಿಯಾದ ಬಳಿಕ ಮಾರುಕಟ್ಟೆಯಲ್ಲಿ ಗುಣಮಟ್ಟವಿಲ್ಲದ ಸ್ಕ್ರೀನ್‌ ಪ್ರೊಟೆಕ್ಟರ್‌ಗಳ ಮಾರಾಟಕ್ಕೆ ಕಡಿವಾಣ ಬೀಳುವ ನಿರೀಕ್ಷೆಯಿದ್ದು, ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳ ಆಯ್ಕೆ ಹೆಚ್ಚಾಗಲಿದೆ.