ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ: ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಸಿಎಂಗೆ ಮನವಿ

ಉಡುಪಿ: ರಾಜ್ಯದಾದ್ಯಂತ ಇರುವ ಬಿಲ್ಲವ, ಈಡಿಗ, ನಾಮಧಾರಿ ಇನ್ನಿತರ ಉಪಪಂಗಡಗಳ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲು ಈ ಬಾರಿಯ ಬಜೆಟ್ ನಲ್ಲಿ ₹50 ಕೋಟಿ ಮೀಸಲಿಡುವಂತೆ ಕೋರಿ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿತು.

ಸಚಿವರು ಹಾಗೂ ಶಾಸಕರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ಬಾರಿಯ ಬಜೆಟ್‌ನಲ್ಲಿ ರಾಜ್ಯದಾದ್ಯಂತ ಇರುವ ಬಿಲ್ಲವ ಈಡಿಗ ನಾಮದಾರಿ ಇನ್ನಿತರ ಉಪ ಪಂಗಡಗಳ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲು ₹ 50 ಕೋಟಿ ನೀಡುವುದಾಗಿ ಭರವಸೆ ನೀಡಿದರು.

ನಿಯೋಗದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿಯ ಮಂಗಳೂರು ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ, ಬಿಲ್ಲವ ಸಮಾಜದ ಮುಖಂಡರಾದ ಬಿ.ಎನ್. ಶಂಕರ ಪೂಜಾರಿ, ಅಚ್ಚುತ ಕಲ್ಮಾಡಿ, ನವೀನ್ ಇದ್ದರು.