ಉಡುಪಿ: ಸಮಾಜ ಸೇವಕ, ಆರ್ಟಿಐ ಕಾರ್ಯಕರ್ತ ಬಾರ್ಕೂರು ಶಂಕರ ಶಾಂತಿ ಅವರಿಗೆ ಬಾರಕೂರು ದೇವಾಲಯದ ಸಭಾಭವನದ ಅಡುಗೆ ಕೋಣೆಯಲ್ಲಿ ಕೂಡಿಹಾಕಿ ಚಿತ್ರ ಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ನೇತೃತ್ವದಲ್ಲಿ ಸೋಮವಾರ ಉಡುಪಿ ಬನ್ನಂಜೆ ಬಿಲ್ಲವ ಸಭಾಭವನದ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸ್ಥಳಕ್ಕೆ ಆಗಮಿಸಿದ ಉಡುಪಿ ಡಿವೈಎಸ್ಪಿ ಶಿವಾನಂದ ನಾಯ್ಕಿ ಅವರಿಗೆ ವೇದಿಕೆಯ ನಾಯಕರು ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಎಂ.ಪೂಜಾರಿ ಮಾತನಾಡಿ, ಪ್ರಕರಣ ನಡೆದು 10 ದಿನಗಳಾದರೂ ಆರೋಪಿಗಳನ್ನು ಈವರೆಗೆ ಬಂಧಿಸಿಲ್ಲ. ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸುವ ಬದಲು ಆತ ನೀಡಿದ ದೂರಿನಂತೆ ಹಲ್ಲೆಗೊಳಗಾದ ವ್ಯಕ್ತಿಯ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಈಗಲೂ ರಾಜರೋಷವಾಗಿ ತಿರುಗಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿಯದೆ, ಶಂಕರ ಶಾಂತಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಎರಡು ದಿನಗಳೊಳಗೆ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಲ್ಲವ ಮುಖಂಡ ಅನಿ ಅಮೀನ್ ಬಂಟ್ವಾಳ, ಆಕಾಶ್ರಾಜ್ ಜೈನ್, ಮುಖಂಡರಾದ ದಯಾನಂದ ಕರ್ಕೇರ, ಮಾಧವ ಬನ್ನಂಜೆ, ಶಿವಾನಂದ ಗಂಗೊಳ್ಳಿ, ನಗರಸಭಾ ಸದಸ್ಯ ಸುಂದರ ಜೆ. ಕಲ್ಮಾಡಿ, ಪ್ರವೀಣ್ ಕೊಡವೂರು, ಮದನ್ ಎಸ್.ಪೂಜಾರಿ, ದೀಪಕ್, ಸುಲೋಚನಾ ದಾಮೋದರ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.