ಭಾರತದ ಕೋವಿಡ್ -19 ಚುಚ್ಚುಮದ್ದು ಅಭಿಯಾನವನ್ನು ಶ್ಲಾಘಿಸಿದ ಮೈಕ್ರೋಸಾಫ್ಟ್ ದಿಗ್ಗಜ: ‘ಜಗತ್ತಿಗೆ ಒಂದು ಪಾಠ’ ಎಂದ ಬಿಲ್ ಗೇಟ್ಸ್

ನವದೆಹಲಿ: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಕೋವಿಡ್ -19 ವಿರುದ್ಧ ಚುಚ್ಚುಮದ್ದು ಅಭಿಯಾನದಲ್ಲಿ ಯಶಸ್ಸನ್ನು ಸಾಧಿಸಿರುವ ಭಾರತವನ್ನು ಶ್ಲಾಘಿಸಿದ್ದಾರೆ ಮತ್ತು ಆರೋಗ್ಯ ಫಲಿತಾಂಶವನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸಿದ ಭಾರತದ ರೀತಿಯು ಜಗತ್ತಿಗೆ ಒಂದು ಪಾಠವಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾದ ಕೆಲವು ದಿನಗಳ ನಂತರ ಮಾಂಡವಿಯಾ ಟ್ವೀಟ್‌ಗೆ ಟ್ವಿಟರ್‌ನಲ್ಲಿ ಉತ್ತರದ ರೂಪದಲ್ಲಿ ಗೇಟ್ಸ್ ಹೇಳಿಕೆ ಬಂದಿದೆ.

ಮೇ 25 ರಂದು ಮನ್ಸುಖ್ ಮಾಂಡವಿಯಾ ವರ್ಲ್ಡ್ ಎಕನಾಮಿಕ್ ಫೋರಮ್ 2022 ರ ಸಭೆಯಿಂದ ಗೇಟ್ಸ್ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ, “ಬಿಲ್ ಗೇಟ್ಸ್ ಅವರೊಂದಿಗೆ ಸಂವಹನ ನಡೆಸಲು ಸಂತೋಷವಾಗಿದೆ. ಅವರು ಕೋವಿಡ್ -19 ನಿರ್ವಹಣೆ ಮತ್ತು ಬೃಹತ್ ವ್ಯಾಕ್ಸಿನೇಷನ್ ಪ್ರಯತ್ನಗಳಲ್ಲಿ ಭಾರತದ ಯಶಸ್ಸನ್ನು ಶ್ಲಾಘಿಸಿದರು” ಎಂದು ಬರೆದುಕೊಂಡಿದ್ದಾರೆ.

ಅದಕ್ಕೆ ಪ್ರತ್ಯುತ್ತರವಾಗಿ, “ಡಾ ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾಗಿದ್ದು ಮತ್ತು ಜಾಗತಿಕ ಆರೋಗ್ಯದ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಂಡಿದ್ದು ಅದ್ಭುತವಾಗಿತ್ತು. ಚುಚ್ಚುಮದ್ದು ಅಭಿಯಾನದಲ್ಲಿ ಭಾರತದ ಯಶಸ್ಸು ಮತ್ತು ಆರೋಗ್ಯದ ಫಲಿತಾಂಶಗಳನ್ನು ಪ್ರಮಾಣಬದ್ಧವಾಗಿ ಹೆಚ್ಚಿಸಲು ತಂತ್ರಜ್ಞಾನದ ಬಳಕೆಯು ಜಗತ್ತಿಗೆ ಅನೇಕ ಪಾಠಗಳನ್ನು ನೀಡುತ್ತದೆ” ಎಂದಿದ್ದಾರೆ.