ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಆರಂಭಕ್ಕೆ ಪ್ರಯತ್ನ: ರಘುಪತಿ ಭಟ್

ಉಡುಪಿ: ಉಡುಪಿಯ ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಆರಂಭಿಸುವ ಕುರಿತಂತೆ, ಮುಖ್ಯಮಂತ್ರಿಗಳೊಂದಿಗೆ ಚಿರ್ಚಿಸಿ, ಮುಂದಿನ ಬಜೆಟ್‍ನಲ್ಲಿ ಅನುಮತಿ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.

ಅವರು ಶನಿವಾರ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ ಮತ್ತು ಉಳ್ಳಾಲ, ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ ಬ್ರಹ್ಮಾವರ, ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್, ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶು ಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಉಡುಪಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಉಡುಪಿ, ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು, ಜಿಲ್ಲಾ ಕೃಷಿಕ ಸಮಾಜ ಉಡುಪಿ ಮತ್ತು ಮಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಆರಂಭಕ್ಕೆ ಅನುಮತಿ ದೊರೆತಿದ್ದು, ಆದರೆ ತಾಂತ್ರಿಕ ಕಾರಣಗಳಿಂದ ಅದು ನೆನೆಗುದಿಗೆ ಬಿದ್ದಿದ್ದು, ಈ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು, ಅಗತ್ಯಬಿದ್ದಲ್ಲಿ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ತೆರಳಿ, ಕೃಷಿ ಕಾಲೇಜಿನ ಅಗತ್ಯತೆಯ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು, ಕೃಷಿ ಕಾಲೇಜಿಗೆ ಅಗತ್ಯವಿರುವ ಜಾಗ ಸಹ ಬ್ರಹ್ಮಾವರದಲ್ಲಿ ಲಭ್ಯವಿದೆ ಎಂದು ಶಾಸಕರು ಹೇಳಿದರು.

ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯದ ಕುಲಪತಿ ಡಾ. ಎಂ.ಕೆ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಕರಾವಳಿಯಂತಹ ವೈಶಿಷ್ಟ್ಯಪೂರ್ಣ ಪ್ರದೇಶದಲ್ಲಿ ಕೃಷಿಯಲ್ಲಿ ಹಲವು ಸವಾಲುಗಳಿದ್ದು, ಹವಾಮಾನ ವೈಪರೀತ್ಯದಿಂದಾಗಿ ಕೃಷಿ ಬದುಕಿನಲ್ಲಿ ವ್ಯತ್ಯಾಸವಾಗುತ್ತಿದೆ. ಇದನ್ನು ತಡೆಯಲು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರವು ವಿಶೇಷವಾಗಿ ಸಹ್ಯಾದ್ರಿ ಪಂಚಮುಖಿ ಕೆಂಪಕ್ಕಿ ಬೀಜದ ತಳಿಯನ್ನು ಅಭಿವೃದ್ಧಿ ಪಡಿಸಿದ್ದು, ಇದನ್ನು ಪ್ರಾಯೋಗಿಕವಾಗಿ ಕೃಷಿಕರಿಗೆ ನೀಡಲಾಗಿದೆ, ಈ ತಳಿಯ ಭತ್ತದ ಪೈರುಗಳು ಅತಿವೃಷ್ಟಿಯನ್ನೂ ತಡೆದುಕೊಂಡು ರೈತರಿಗೆ ಅಧಿಕ ಇಳುವರಿ ನೀಡಲಿದೆ ಎಂದು ಹೇಳಿದರು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಅಭಿವೃದ್ಧಿ ಪಡಿಸಿದ ನೂತನ ಭತ್ತದ ತಳಿ ಸಹ್ಯಾದ್ರಿ ಪಂಚಮುಖಿಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಬಿಡುಗಡೆಗೊಳಿಸಿದರು.

ಸಹ್ಯಾದ್ರಿ ಜೀವಾಣುಯುಕ್ತ ಎರೆಗೊಬ್ಬರ ಹಾಗೂ ಸಹ್ಯಾದ್ರಿ ಎರೆ ಜಲವನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ.ಕೆ.ಶೆಟ್ಟಿ ಬಿಡುಗಡೆಗೊಳಿಸಿದರು.

ತಾಲೂಕು ಪಂಚಾಯತ್ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಉಪಾಧ್ಯಕ್ಷ ಭುಜಂಗ ಶೆಟ್ಟಿ, ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ .ಎಸ್. ಕೋಟ್ಯಾನ್, ಜಿ.ಪಂ. ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ, ಕೃಷಿ ವ್ಯವಸ್ಥಾಪನಾ ಮಂಡಳಿಯ ಸದಸ್ಯರು, ವಿಶ್ವ ವಿದ್ಯಾಲಯದ ನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು.

ಕೃಷಿಮೇಳದಲ್ಲಿ ವಿವಿಧ ಕೃಷಿ ಯಂತ್ರೋಪಕರಣಗಳ ಮಳಿಗೆ, ವಿವಿಧ ನರ್ಸರಿ ಗಿಡಗಳ ಮಳಿಗೆಗಳು, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಮೀನುಗಾರಿಕಾ ಇಲಾಖೆಯ ವಸ್ತುಪ್ರದರ್ಶನ, ವಿವಿಧ ರೀತಿಯ ಭತ್ತದ ತಳಿಗಳ ಪ್ರದರ್ಶನ, ದೇಶಿ ತಳಿ ಹಸುಗಳ ಪ್ರದರ್ಶನ, ಸಾವಯವ ಗೊಬ್ಬರ ಮಳಿಗೆಗಳನ್ನು ತೆರೆಯಲಾಗಿತ್ತು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಸಹ ಸಂಶೋಧನಾ/ವಿಸ್ತರಣಾ ನಿರ್ದೇಶಕ ಡಾ.ಎಸ್.ಯು.ಪಾಟೀಲ್ ಸ್ವಾಗತಿಸಿದರು, ಕಾರ್ಯಕ್ರಮ ಸಂಯೋಜಕ ಡಾ.ಧನಂಜಯ ವಂದಿಸಿದರು.