ಪೆರ್ಡೂರಿನಲ್ಲಿ ಭರತನಾಟ್ಯ ತರಗತಿ ಉದ್ಘಾಟನೆ

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಕಲೆ ಭರತನಾಟ್ಯ

ಪೆರ್ಡೂರು: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಭರತನಾಟ್ಯದಂತಹ ಶಾಸ್ತ್ರೀಯ ಕಲಾಪ್ರಕಾರಗಳ ಪಾತ್ರ ಮಹತ್ವದ್ದಾಗಿದ್ದು ಅಂತಹ ಕಲಾ ಪ್ರಕಾರವನ್ನು ಚಾಣಕ್ಯ ಸಂಸ್ಥೆ ಪೆರ್ಡೂರಿನಲ್ಲಿ ಪ್ರಾರಂಭಿಸುವುದರಿಂದ ಇಲ್ಲಿನ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದಂತಾಗಿದೆ ಎಂದು ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನ ಅನುದಾನಿತ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನರಸಿಂಹ ದೇವಾಡಿಗ ಹೇಳಿದರು.

ಅವರು ಜೂ. 7ರಂದು ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಪ್ರಧಾನ ಕಚೇರಿ ಕಟ್ಟಡದ ಅನಂತ ಸೌರಭ ಸಭಾಂಗಣದಲ್ಲಿ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಆರಂಭಗೊಂಡ ಭರತನಾಟ್ಯ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.

ಅವಕಾಶ ಬಳಸಿಕೊಳ್ಳಿ:

ನಿರಂತರ 216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿದ ಸಾಧಕಿ ಭರತನಾಟ್ಯ ಗುರು ವಿಧುಷಿ ದೀಕ್ಷಾ ವಿ. ಮಾತನಾಡಿ ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು, ಏಕಾಗ್ರತೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ನೃತ್ಯ ಶಿಕ್ಷಣ ಸಹಕಾರಿಯಾಗುತ್ತದೆ. ಹಿಂದೆ ಇಂತಹ ಕಲಾ ಪ್ರಕಾರಗಳನ್ನು ದೂರದ ಊರಿಗೆ ಹೋಗಿ ಕಲಿಯಬೇಕಾಗಿತ್ತು. ಆದರೆ ಇಂದು ನಮ್ಮ ಮನೆಯ ಸಮೀಪವೇ ಅವಕಾಶ ಕಲ್ಪಿಸುವುದರಿಂದ ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಿ ಎಂದರು.

ಕಲಾರಾದನೇ ಸಾಧನೆ:

ಚಾಣಕ್ಯ ಶಿಕ್ಷಣ ಸಂಸ್ಥೆಯ ರೂವಾರಿ ಉದಯ್ ಕುಮಾರ್ ಶೆಟ್ಟಿ ಅವರು ಯಾವುದೇ ಲಾಭದ ಉದ್ದೇಶವನ್ನು ಇಟ್ಟುಕೊಳ್ಳದೆ ಕಳೆದ 11 ವರ್ಷಗಳಿಂದ ವಿವಿಧ ಕಲಾ ಪ್ರಕಾರಗಳನ್ನು ಒಂದೇ ಸೂರಿನಡಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ತರಬೇತಿ ನೀಡುತ್ತಾ ಕಲಾ ಆರಾಧನೆಯ ಜೊತೆಗೆ ಮಕ್ಕಳ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಯಕ್ಷಗಾನ ಗುರು ಪ್ರಕಾಶ್ ನಾಯಕ್ ಹೇಳಿದರು.

ಪೋಷಕರ ಸಹಕಾರ ಅಗತ್ಯ:

ಹೆಸರಾಂತ ಗುರುಗಳಿಂದ ತರಬೇತಿಯನ್ನು ನೀಡುತ್ತಿರುವ ಚಾಣಕ್ಯ ಸಂಸ್ಥೆಗೆ ಎಲ್ಲಾ ಪೋಷಕರ ಸಹಕಾರ ಬೇಕು. ಮಕ್ಕಳು ಮನೆಯಲ್ಲಿ ಮೊಬೈಲ್ ಟಿವಿ ನೋಡುತ್ತಾ ಕಾಲಹರಣ ಮಾಡುವ ಬದಲು ಇಂತಹ ಕಲಾ ಪ್ರಕಾರಗಳಲ್ಲಿ ಮಕ್ಕಳನ್ನು ಸೇರಿಸಿದರು ಮೂಲಕ ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಜವಾಬ್ದಾರಿ ಪೋಷಕರದ್ದು ಎಂದು ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಸಂತೆಕಟ್ಟೆ ರಾಮದಾಸ್ ನಾಯಕ್ ಹೇಳಿದರು.

ವಿಶೇಷ ರಿಯಾಯಿತಿ:

ಈಗಾಗಲೇ ಯಕ್ಷಗಾನ ಫಿಲಂ ಡ್ಯಾನ್ಸ್ ತರಗತಿಯನ್ನು ಆರಂಭಿಸಿದ್ದು ಅದರ ಜೊತೆಗೆ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಹಾರ್ಮೋನಿಯಂ, ಕೊಳಲು, ತಬಲಾ,ಕರಾಟೆ ತರಗತಿ ಪ್ರಾರಂಭಿಸಲಾಗಿದ್ದು ಜೂನ್ 15 ರ ಒಳಗೆ ಪ್ರವೇಶಾತಿ ಪಡೆಯುವವರಿಗೆ ವಿಶೇಷ ರಿಯಾಯಿತಿಯನ್ನು ಕಲ್ಪಿಸಲಾಗಿದೆ ಎಂದು ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಹೇಳಿದರು. ಚಾಣಕ್ಯ ಸಂಸ್ಥೆಯ ಸಂಯೋಜಕಿ ವನಿತಾ ಕಾರ್ಯಕ್ರಮ ನಿರೂಪಿಸಿದರು.