ಭಾರತ್ ಜೋಡೋ ಯಾತ್ರೆ: ರಾಜ್ಯ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ?

ಬೆಂಗಳೂರು: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 30 ರಂದು ಕರ್ನಾಟಕಕ್ಕೆ ಪ್ರವೇಶಿಸಲಿದ್ದು, ಪಕ್ಷದ ರಾಜ್ಯ ಮುಖ್ಯಸ್ಥ ಡಿ ಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಭಿನ್ನಾಭಿಪ್ರಾಯವು ರಾಜ್ಯ ಘಟಕದಲ್ಲಿನ ದೋಷಗಳನ್ನು ಮತ್ತೆ ಬಹಿರಂಗಪಡಿಸಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕದ ಉದ್ದಗಲಕ್ಕೂ 22 ದಿನಗಳ ಕಾಲ ಸಂಚರಿಸಲಿದೆ. ಆದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಬಣಗಳು ಒಂದಾಗಲು ಹೆಣಗಾಡುತ್ತಿರುವಂತೆ ತೋರುತ್ತಿದೆ. ರಾಜ್ಯದಲ್ಲಿ ಯಾತ್ರೆಯನ್ನು ಯಶಸ್ವಿಗೊಳಿಸಲು ಎಲ್ಲರೂ ಶ್ರಮ ಹಾಕುತ್ತಿಲ್ಲ ಎಂದು ಡಿ.ಕೆ ಶಿವಕುಮಾರ್ ಪಕ್ಷದ ಸಹೋದ್ಯೋಗಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಶುಕ್ರವಾರ ನಡೆದ ಸಭೆಯಲ್ಲಿ ಶಿವಕುಮಾರ್ ಅವರು ಸಿದ್ದರಾಮಯ್ಯ ಬಣದ ವಿರುದ್ಧ ವಾಗ್ದಾಳಿ ನಡೆಸಿದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸುನಿಲ್ (ರಾಜಕೀಯ ತಂತ್ರಜ್ಞ ಸುನಿಲ್ ಕಾನುಗೋಲು) ಅವರ ನೇತೃತ್ವದಲ್ಲಿ ಪ್ರತಿದಿನ ರಾಜಕೀಯ ವಿಶ್ಲೇಷಣೆ ನಡೆಸಲು ಪ್ರತ್ಯೇಕ ತಂಡವನ್ನು ನೇಮಿಸಿದೆ. ಕ್ಷೇತ್ರದಾದ್ಯಂತ ಸುಮಾರು 600 ಮಂದಿ ಕಾಂಗ್ರೆಸ್‌ನ ಎಲ್ಲಾ ಸಂಭಾವ್ಯ ಅಭ್ಯರ್ಥಿಗಳನ್ನು ವೀಕ್ಷಿಸುತ್ತಿದ್ದಾರೆ. ನಮಗೆ ತಿಳಿದಿರಬಹುದು ಅಥವಾ ತಿಳಿಯದೇ ಇರಬಹುದು. ಅವರು ಎಲ್ಲಾ ಹಾಲಿ, ಸೋತ ಮತ್ತು ಶಾಸಕ ಆಕಾಂಕ್ಷಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದರು.

ರಾಜ್ಯ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಆರ್‌ವಿ ದೇಶಪಾಂಡೆ ಅವರನ್ನು ಹೆಸರಿಸಿದ ಶಿವಕುಮಾರ್, ದೇಶಪಾಂಡೆ ಅವರ ಕ್ಷೇತ್ರದಿಂದ 5,000 ಜನರನ್ನು ಯಾತ್ರೆಗೆ ಕರೆತರುವಂತೆ ಕೇಳಿಕೊಂಡಿದ್ದು, ಅವರ ಕ್ಷೇತ್ರ ದೂರದಲ್ಲಿರುವುದರಿಂದ ಸಾಧ್ಯವಿಲ್ಲ ಎಂದಿದ್ದಾರೆ. ರಾಹುಲ್ ಗಾಂಧಿಯವರಿಗಾಗಿ ಒಂದು ದಿನಕ್ಕಾಗಿ ನಾವು ಇದನ್ನು ಮಾಡಲು ಸಾಧ್ಯವಿಲ್ಲವೇ? ಎಂದು ಅವರು ಪ್ರಶ್ನಿಸಿದರು.

ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಯಾತ್ರೆಯ ಉಸ್ತುವಾರಿ ರಾಜ್ಯ ನಾಯಕರಾಗಿದ್ದಾರೆ.

ಪಕ್ಷದೊಳಗಿನ ಕೆಲವರ ಮಾಹಿತಿಯ ಪ್ರಕಾರ, ಈ ಯಾತ್ರೆಯು ಶಿವಕುಮಾರ್‌ ರವರಿಗೆ ತಮ್ಮ ಸಂಘಟನಾ ಕೌಶಲ್ಯವನ್ನು ಹೈಕಮಾಂಡ್‌ಗೆ ಪ್ರದರ್ಶಿಸುವ ಅವಕಾಶವನ್ನು ಒದಗಿಸುವುದರಿಂದ ಸಿದ್ದರಾಮಯ್ಯನವರ ಗುಂಪು ತನ್ನನ್ನು ತಾನೇ ಹಿಡಿದಿಟ್ಟುಕೊಳ್ಳುವ ಸಾಧ್ಯತೆಯಿದೆ. ಸಿದ್ದರಾಮಯ್ಯ ಅವರು ಕೂಡಾ ರಥಯಾತ್ರೆ ನಡೆಸಲು ಮುಂದಾಗಿದ್ದು, 1999ರಲ್ಲಿ ಮಾಜಿ ಸಿಎಂ ಎಸ್‌ಎಂ ಕೃಷ್ಣ ನೇತೃತ್ವದ ಪಾಂಚಜನ್ಯ ಯಾತ್ರೆ ಮಾದರಿಯಲ್ಲಿಯೇ ವಿಧಾನಸಭೆ ಚುನಾವಣೆಗೂ ಮುನ್ನ ಮಾಜಿ ಸಿಎಂ ಯಾತ್ರೆ ನಡೆಯಲಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಅವರ ಬೆಂಬಲಿಗರು ಅದ್ಧೂರಿಯಾಗಿ ಆಚರಿಸುವುದನ್ನು ಘೋಷಿಸಿದ ಬಳಿಕ ಉಭಯ ನಾಯಕರ ನಡುವಿನ ಸಂಬಂಧ ಹದಗೆಟ್ಟಿದೆ. ಹುಟ್ಟುಹಬ್ಬದ ಆಚರಣೆಯನ್ನು ಮೊದಲಿಗೆ ವಿರೋಧಿಸಿದ್ದ ಡಿಕೆಶಿ, ರಾಹುಲ್ ಗಾಂಧಿ ಮತ್ತು ಕೆ.ಸಿ ವೇಣುಗೋಪಾಲ್ ಬೆಂಬಲ ನೀಡಿದ ಬಳಿಕ ಹುಟ್ಟುಹಬ್ಬದ ಆಚರಣೆಗೆ ವಿರೋಧ ವ್ಯಕ್ತಪಡಿಸಲಿಲ್ಲ. ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಬ್ಬರು ನಾಯಕರು ಕೂಡಾ ಮುಖ್ಯಮಂತ್ರಿ ಸ್ಥಾನದ ಮುಂಚೂಣಿಯಲ್ಲಿರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಈ ಹೊತ್ತಿನಲ್ಲಿ ಎರಡು ಬಣಗಳ ನಡುವೆ ಅಸಮಾಧನ ಹೊಗೆಯಾಡುತ್ತಿದೆ ಎಂದು ಮಾಧ್ಯಮ ವರದಿ ಹೇಳುತ್ತಿದೆ.