ನವದೆಹಲಿ: ಇಂಟ್ರಾನಾಸಲ್ (ಮೂಗಿನ) ಕೋವಿಡ್-19 ಲಸಿಕೆಗಾಗಿ ಭಾರತ್ ಬಯೋಟೆಕ್ ಹಂತ III ಪ್ರಯೋಗಗಳು ಮತ್ತು ಬೂಸ್ಟರ್ ಡೋಸ್ ನ ಕ್ಲಿನಿಕಲ್ ಅಭಿವೃದ್ಧಿಯನ್ನು ಪೂರ್ಣಗೊಳಿಸಿದೆ. ಕೋವಿಡ್ -19 ಲಸಿಕೆ ಕೋವಾಕ್ಸಿನ್ ತಯಾರಕರಾದ ಭಾರತ್ ಬಯೋಟೆಕ್ ಮೂಗಿನ ಮೂಲಕ ನೀಡಲಾಗುವ BBV154 ಲಸಿಕೆಯ ಮೂರನೇ ಹಂತದ ಪ್ರಯೋಗಗಳಿಗಾಗಿ ಕ್ಲಿನಿಕಲ್ ಅಭಿವೃದ್ಧಿಯನ್ನು ಪೂರ್ಣಗೊಳಿಸಿದೆ. ಚುಚ್ಚುಮದ್ದಿಗೆ ಹೆದರುವವರಿಗೆ ಮೂಗಿನ ಮೂಲಕ ಔಷಧಿಯನ್ನು ನೀಡಬಹುದಾಗಿದ್ದು, ಪ್ರಪಂಚದ ಇತರ ದೇಶಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಚಾಲ್ತಿಯಲ್ಲಿದೆ. ಬೂಸ್ಟರ್ ಡೋಸ್‌ಗಳನ್ನು ಮೂಗಿನ ಮೂಲಕ ನೀಡಲು ಬೇಕಾದ ಪ್ರಯೋಗಗಳು ನಡೆಯುತ್ತಿದ್ದು, ಮೂರನೇ ಹಂತದ ಪ್ರಯೋಗ ಪೂರ್ಣಗೊಂಡಿದೆ.
BBV154 ಅನ್ನು ಪ್ರಾಥಮಿಕ ಡೋಸ್ (2-ಡೋಸ್) ವೇಳಾಪಟ್ಟಿಯಂತೆ ಮೌಲ್ಯಮಾಪನ ಮಾಡಲು ಎರಡು ಪ್ರತ್ಯೇಕ ಮತ್ತು ಏಕಕಾಲಿಕ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗಿದೆ ಮತ್ತು ಭಾರತದಲ್ಲಿ ಸಾಮಾನ್ಯವಾಗಿ ನೀಡಲಾಗುವ ಎರಡು ಕೋವಿಡ್-19 ಲಸಿಕೆಗಳಲ್ಲಿ ಈ ಹಿಂದೆ 2 ಡೋಸ್‌ಗಳನ್ನು ಪಡೆದಿರುವವರಿಗೆ ಒಂದು ಭಿನ್ನ ಆಯ್ಕೆಯ ಬೂಸ್ಟರ್ ಡೋಸ್ ಗಾಗಿ ಪ್ರಯೋಗ ನಡೆದಿದೆ ಎಂದು ಕಂಪನಿ ಹೇಳಿದೆ. III ನೇ ಹಂತದ ಮಾನವ ಕ್ಲಿನಿಕಲ್ ಪ್ರಯೋಗಗಳ ಡೇಟಾವನ್ನು ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರಗಳಿಗೆ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ತಿಳಿಸಿದೆ.
ಕೋವಿಡ್ ವೈರಸ್ ಮೂಗಿನ ಮೂಲಕ ದೇಹವನ್ನು ಪ್ರವೇಶಿಸುವುದರಿಂದ ಇಂಟ್ರಾನಾಸಲ್ BBV154 ಲಸಿಕೆಯು ಮೂಗಿನ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದಲ್ಲಿ ಸ್ಥಳೀಯ ಪ್ರತಿಕಾಯಗಳನ್ನು ಉತ್ಪಾದಿಸಬಲ್ಲದು. ಇದು ಸೋಂಕು ಮತ್ತು ಪ್ರಸರಣವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಒದಗಿಸುತ್ತದೆ.