ಶ್ರೀರಾಮ ಭಜನಾ ಮಂಡಳಿ ಭಜನೆಕಟ್ಟೆ ಕೊಂಡಾಡಿ ಸುವರ್ಣ ಮಹೋತ್ಸ ನಿಮಿತ್ತ ನೆನೆದವರ ಮನೆಯಲ್ಲಿ ಭಜನೆ ಕಾರ್ಯಕ್ರಮ

ಹಿರಿಯಡ್ಕ: ಶ್ರೀರಾಮ ಭಜನಾ ಮಂಡಳಿ ಭಜನೆಕಟ್ಟೆ ಕೊಂಡಾಡಿಯ ಸುವರ್ಣ ಮಹೋತ್ಸವದ ಅಂಗವಾಗಿ ‘ನೆನೆದವರ ಮನೆಯಲ್ಲಿ ಭಜನೆ’ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೇಮಾರು ಮಠದ ಈಶ ವಿಠ್ಠಲದಾಸ ಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಯಶಸ್ವಿ ಕಾರ್ಯಕ್ರಮವು ಮನೆಮಾತಾಗಿದೆ.

ಮದರಂಗಿ, ಹುಟ್ಟುಹಬ್ಬ, ಮದುವೆಯ ವಾರ್ಷಿಕೋತ್ಸವ ಹಾಗೂ ಹಬ್ಬ ಹರಿದಿನಗಳಲ್ಲಿಯೂ ಭಜನೆ ನಡೆಸಿದ್ದು 60ನೇ ದಿನದ ಭಜನೆಯು ಆನಂದ ಶೆಟ್ಟಿ ಕೊಂಡಾಡಿ ಇವರ ಮನೆಯಲ್ಲಿ ನಡೆಯಿತು.

ಭಜನೆ ನಡೆದ ಪ್ರತಿ ಮನೆಯವರಿಗೆ ಪುರಂದರದಾಸರ ಒಂದು ಭಜನೆ ಪುಸ್ತಕವನ್ನು ನೀಡಿ ಶ್ರೀ ರಾಮ ಭಜನಾ ಮಂಡಳಿಯ ಸದಸ್ಯರಿಗೆ ಹಾಗೂ ಭಜನಾ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ಭಕ್ತಾದಿಗಳಿಗೆ ಪರಮಾತ್ಮನು ಆಯುರಾರೋಗ್ಯ, ಸಕಲ ಐಶ್ವರ್ಯ, ನೆಮ್ಮದಿ, ಗೌರವವನ್ನು ಕರುಣಿಸಲೆಂದು ಪರಸ್ಪರ ಪ್ರಾರ್ಥಿಸುವುದು ವಾಡಿಕೆಯಾಗಿದೆ.

ದೇವರನ್ನು ಸಂತ್ರಪ್ತಿ ಪಡಿಸಲು ಇರುವ ಏಕೈಕ ಮಾರ್ಗ ಭಜನೆಯಾಗಿದ್ದು ಕಾರ್ಯಕ್ರಮವು ಯಶಸ್ಸನ್ನು ಕಾಣುತ್ತಿದೆ.

ಮುಂದಿನ ಶ್ರೀ ರಾಮ ನವಮಿಯಂದು ನಡೆಯಲಿರುವ ಅಖಂಡ ಏಕಾಹ ಭಜನಾ ಮಂಗಲೋತ್ಸವದ ಸುವರ್ಣ ಮಹೋತ್ಸವಕ್ಕೆ ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕೆಂದು ಮಂಡಳಿಯ ಪ್ರಕಟಣೆ ತಿಳಿಸಿದೆ.