ಅಮೆಜಾನ್ ಕಸ್ಟಮರ್ ಕೇರ್ ಹೆಸರಲ್ಲಿ ಹೀಗೂ ಮೋಸ ಮಾಡ್ತಾರೆ ಎಚ್ಚರ: ಫ್ಯಾನ್ ಕೊಳ್ಳಲು ಹೋಗಿ 1.30 ಲಕ್ಷ ಕಳೆದುಕೊಂಡ ಮಂಗಳೂರಿನ ಮಹಿಳೆ!

ಮಂಗಳೂರು: ಆನ್‌ಲೈನ್‌ನಲ್ಲಿ ಖರೀದಿಸಿದ್ದ ಸೀಲಿಂಗ್ ಫ್ಯಾನ್ ಆರ್ಡರ್ ರದ್ದಾಗಿ, ಹಣ ಮರುಪಾವತಿ ಪಡೆಯಲು ಗೂಗಲ್‌ನಲ್ಲಿ ಅಮೆಜಾನ್ ಕಸ್ಟಮರ್ ಕೇರ್ ನಂಬರ್ ಹುಡುಕಿದ ಮಹಿಳೆಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹1.30 ಲಕ್ಷ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಈ ಕುರಿತು 37 ವರ್ಷದ ಮಹಿಳೆಯೊಬ್ಬರು ಮಂಗಳೂರಿನ ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ.

ರಿಫಂಡ್ ಹೆಸರಿನಲ್ಲಿ ವಂಚನೆ

ದೂರಿನ ಪ್ರಕಾರ, ಮಹಿಳೆ ಅಕ್ಟೋಬರ್ 21ರಂದು ಅಮೆಜಾನ್ ಆ್ಯಪ್ ಮೂಲಕ ಸೀಲಿಂಗ್ ಫ್ಯಾನ್ ಆರ್ಡರ್ ಮಾಡಿ, ಪತಿಯ ಗೂಗಲ್ ಪೇ ಖಾತೆಯಿಂದ ₹7,903 ಪಾವತಿಸಿದ್ದರು. ಆದರೆ ಕೆಲವೇ ಸಮಯದಲ್ಲಿ ಆರ್ಡರ್ ರದ್ದಾಗಿತ್ತು. ಹಲವು ದಿನ ಕಳೆದರೂ ಹಣ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಅಕ್ಟೋಬರ್ 31ರಂದು ಗೂಗಲ್‌ನಲ್ಲಿ ಅಮೆಜಾನ್ ಕಸ್ಟಮರ್ ಕೇರ್ ಹೆಲ್ಪ್‌ಲೈನ್ ನಂಬರ್ ಹುಡುಕಿದ್ದಾರೆ.

ಸರ್ಚ್‌ನಲ್ಲಿ ದೊರೆತ ನಂಬರ್‌ಗೆ ಕರೆ ಮಾಡಿದಾಗ ಮೊದಲಿಗೆ ಕರೆ ಕಡಿತಗೊಂಡಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಅದೇ ನಂಬರ್‌ನಿಂದ ವಾಪಸ್ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ತಾನು ಅಮೆಜಾನ್ ಕಸ್ಟಮರ್ ಕೇರ್ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದಾನೆ. ನಕಲಿ ಗುರುತಿನ ಸಂಖ್ಯೆಯನ್ನೂ ನೀಡಿ ಮಹಿಳೆಯ ವಿಶ್ವಾಸ ಗಳಿಸಿದ್ದಾನೆ.

ಗೂಗಲ್ ಪೇ ಮೂಲಕ ₹80 ಸಾವಿರ ವರ್ಗಾವಣೆ

ಆರ್ಡರ್ ರದ್ದಾದ ಹಣವನ್ನು ತಕ್ಷಣವೇ ಮರುಪಾವತಿ ಮಾಡುವುದಾಗಿ ನಂಬಿಸಿದ ವಂಚಕ, ಮಹಿಳೆಗೆ ಗೂಗಲ್ ಪೇ ತೆರೆಯುವಂತೆ ಸೂಚಿಸಿದ್ದಾನೆ. ಬಳಿಕ ಅದರಲ್ಲಿ ‘RAKILEL ISLAM’ ಎಂದು ಹುಡುಕುವಂತೆ ತಿಳಿಸಿದ್ದಾನೆ. ನಂತರ ಮೊಬೈಲ್ ಸಂಖ್ಯೆಗೆ ಸಂಬಂಧಿಸಿದಂತೆ ₹80 ಸಾವಿರ ಮೊತ್ತದ ಐಡಿ ಸೃಷ್ಟಿಸಿ, ಮಹಿಳೆಯ ಗಮನಕ್ಕೆ ಬಾರದಂತೆ ಆಕೆಯ ಖಾತೆಯಿಂದ ₹80,000 ವರ್ಗಾಯಿಸಿಕೊಂಡಿದ್ದಾನೆ.

ಇದಾದ ಬೆನ್ನಲ್ಲೇ ಮಹಿಳೆಯ ಬ್ಯಾಂಕ್ ಖಾತೆಯಿಂದ ಐಎಂಪಿಎಸ್ (IMPS) ಮೂಲಕ ಮತ್ತೆ ₹50,000 ಕಡಿತಗೊಂಡಿದೆ. ಹೀಗೆ ಒಂದೇ ದಿನದಲ್ಲಿ ಒಟ್ಟು ₹1.30 ಲಕ್ಷ ಹಣವನ್ನು ವಂಚಕರು ದೋಚಿದ್ದಾರೆ.

ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡ ಸಂದೇಶಗಳನ್ನು ಗಮನಿಸಿದ ಮಹಿಳೆಗೆ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ತಕ್ಷಣ ಮಂಗಳೂರು ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.