ಎಚ್ಚರ, ಬ್ಯಾಂಕ್ ಮ್ಯಾನೇಜರ್ ಗಳೂ ಹೀಗೆಲ್ಲಾ ವಂಚನೆ ಮಾಡ್ತಾರೆ, ಉದ್ಯಮಿಯಿಂದ ₹2.66 ಕೋಟಿ ದೋಚಿದ ಖಾಸಗಿ ಬ್ಯಾಂಕ್ ಮ್ಯಾನೇಜರ್ ಬಲೆಗೆ

ಬೆಂಗಳೂರು : ₹25ರಿಂದ ₹30 ಕೋಟಿ ಮೌಲ್ಯದ ವ್ಯವಹಾರ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ ₹2.66 ಕೋಟಿ ಪಡೆದು ಬ್ಯಾಂಕ್ ಮ್ಯಾನೇಜರ್ ಒಬ್ಬ ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಮೂವರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ವಿನೋದ್ ಕುಮಾರ್, ಅರುಣ್ ಹಾಗೂ ಕಿರಣ್ ಎಂದು ಗುರುತಿಸಲಾಗಿದೆ. ಹೆಸರಘಟ್ಟ ಶಾಖೆಯ ಆಕ್ಸಿಸ್ ಬ್ಯಾಂಕ್‌ನ ಮ್ಯಾನೇಜರ್ ಆಗಿದ್ದ ವಿನೋದ್ ಕುಮಾರ್ ಈ ವಂಚನೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಲಾಜಿಸ್ಟಿಕ್ಸ್ ಹಾಗೂ ಮ್ಯಾನ್‌ಪವರ್ ಸೇವೆ ನೀಡುವ ಕಂಪನಿಯ ಮಾಲೀಕ ಸುಬ್ರಮಣ್ಯ ಅವರು ಹೆಸರಘಟ್ಟ ಶಾಖೆಯ ಆಕ್ಸಿಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ವ್ಯವಹಾರದ ನಿಮಿತ್ತ ಆಗಾಗ ಬ್ಯಾಂಕ್‌ಗೆ ತೆರಳುತ್ತಿದ್ದ ವೇಳೆ ಮ್ಯಾನೇಜರ್ ವಿನೋದ್ ಕುಮಾರ್ ಅವರೊಂದಿಗೆ ಪರಿಚಯ ಬೆಳೆದಿತ್ತು. ಈ ವೇಳೆ ಸುಬ್ರಮಣ್ಯ ಅವರ ವ್ಯವಹಾರದ ಮಾಹಿತಿ ಮತ್ತು ಮೊಬೈಲ್ ಸಂಖ್ಯೆಯನ್ನು ವಿನೋದ್ ಪಡೆದುಕೊಂಡಿದ್ದ ಎನ್ನಲಾಗಿದೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ‘ರಾಹುಲ್’ ಹೆಸರಿನಲ್ಲಿ ಕರೆ ಮಾಡಿದ ವಿನೋದ್, ದೊಡ್ಡ ಮಟ್ಟದ ಲಾಜಿಸ್ಟಿಕ್ಸ್ ಮತ್ತು ಮ್ಯಾನ್‌ಪವರ್ ವ್ಯವಹಾರ ನಡೆಸುತ್ತಿರುವುದಾಗಿ ಹೇಳಿ, ಒಂದು ವರ್ಷದೊಳಗೆ ₹25ರಿಂದ ₹30 ಕೋಟಿ ಮೌಲ್ಯದ ವ್ಯವಹಾರ ಒದಗಿಸುವುದಾಗಿ ಭರವಸೆ ನೀಡಿದ್ದ. ಇದಕ್ಕಾಗಿ ಮುಂಗಡವಾಗಿ ಶೇ.10ರಷ್ಟು ಕಮಿಷನ್ ಹಣ ನೀಡುವಂತೆ ಕೇಳಿದ್ದಾನೆ ಎನ್ನಲಾಗಿದೆ.

ಆರೋಪಿಯ ಮಾತು ನಂಬಿದ ಸುಬ್ರಮಣ್ಯ ಅವರು ಕಳೆದ ಫೆಬ್ರುವರಿಯಿಂದ ವಿವಿಧ ಹಂತಗಳಲ್ಲಿ ಒಟ್ಟು ₹2.66 ಕೋಟಿ ಹಣವನ್ನು ಆರ್‌ಟಿಜಿಎಸ್ ಮೂಲಕ ಮಲ್ಲಿಕಾರ್ಜುನ್ ಎಂಬಾತನ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ಆದರೆ ಹಣ ಪಡೆದ ಬಳಿಕ ಯಾವುದೇ ವ್ಯವಹಾರ ಒದಗಿಸದೆ ಆರೋಪಿಗಳು ಸಬೂಬು ಹೇಳಿ ಕಾಲಹರಣ ಮಾಡುತ್ತಿದ್ದರು.

ಅನುಮಾನಗೊಂಡ ಸುಬ್ರಮಣ್ಯ ಅವರು ಪರಿಶೀಲನೆ ನಡೆಸಿದಾಗ, ‘ರಾಹುಲ್’ ಹೆಸರಿನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೇ ಬ್ಯಾಂಕ್ ಮ್ಯಾನೇಜರ್ ವಿನೋದ್ ಕುಮಾರ್ ಎಂಬುದು ಬೆಳಕಿಗೆ ಬಂದಿದೆ. ದೂರಿನ ಮೇರೆಗೆ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿನೋದ್ ಕುಮಾರ್, ಅರುಣ್ ಹಾಗೂ ಕಿರಣ್ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.