ಬೆಂಗಳೂರು: ಮಹಿಳೆಯರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಹಲವು ಕ್ರಮಗಳನ್ನು ಜಾರಿಗೊಳಿಸಿದ್ದರೂ, ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) 2024ರ ವರದಿ ಆತಂಕಕಾರಿ ಅಂಶಗಳನ್ನು ಬಹಿರಂಗಪಡಿಸಿದೆ. ದೇಶದ 19 ಮಹಾನಗರಗಳ ಪೈಕಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದು, ಮುಂಬೈ ಎರಡನೇ ಸ್ಥಾನದಲ್ಲಿದೆ.
ವರದಿ ಪ್ರಕಾರ, 2024ರಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ಒಟ್ಟು 4,748 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಈ ಸಂಖ್ಯೆ 4,870 ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ಮಟ್ಟಿನ ಇಳಿಕೆ ಕಂಡುಬಂದಿದೆ.
ಅತ್ಯಾಚಾರ ಪ್ರಕರಣಗಳಲ್ಲಿ ಕೂಡ ಅಲ್ಪ ಪ್ರಮಾಣದ ಇಳಿಕೆ ದಾಖಲಾಗಿದ್ದು, 2024ರಲ್ಲಿ 168 ಪ್ರಕರಣಗಳು ದಾಖಲಾಗಿವೆ. 2023ರೊಂದಿಗೆ ಹೋಲಿಸಿದರೆ ಕೇವಲ ಒಂದು ಪ್ರಕರಣ ಮಾತ್ರ ಕಡಿಮೆಯಾಗಿದೆ. ಲೈಂಗಿಕ ಕಿರುಕುಳ ಪ್ರಕರಣಗಳು 210ರಿಂದ 180ಕ್ಕೆ ಇಳಿದಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.
ಇದೇ ವೇಳೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇಂತಹ 897 ಪ್ರಕರಣಗಳು ನಗರದಲ್ಲಿ ದಾಖಲಾಗಿವೆ. ಮಹಿಳೆಯನ್ನು ವಿವಸ್ತ್ರಗೊಳಿಸುವ ಉದ್ದೇಶದ ದೌರ್ಜನ್ಯ ಪ್ರಕರಣಗಳಲ್ಲಿ 66 ಪ್ರಕರಣಗಳೊಂದಿಗೆ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.
ವರದಕ್ಷಿಣೆ ಸಾವು ಪ್ರಕರಣಗಳಲ್ಲಿ 25 ಪ್ರಕರಣಗಳು ದಾಖಲಾಗಿದ್ದು, ಜೈಪುರದೊಂದಿಗೆ ಬೆಂಗಳೂರು ನಾಲ್ಕನೇ ಸ್ಥಾನ ಹಂಚಿಕೊಂಡಿದೆ.
NCRB ವರದಿ ಪ್ರಕಾರ, 19 ಮಹಾನಗರಗಳಲ್ಲಿ ದಾಖಲಾಗಿರುವ ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಪತಿ ಅಥವಾ ಸಂಬಂಧಿಕರಿಂದ ನಡೆಯುವ ಕ್ರೌರ್ಯ ಪ್ರಕರಣಗಳ ಪ್ರಮಾಣವೇ ಹೆಚ್ಚು ಇದ್ದು, ಇದು ಒಟ್ಟು ಪ್ರಕರಣಗಳ ಶೇ.28.4ರಷ್ಟಿದೆ. ಬಳಿಕ ಮಹಿಳೆಯರ ಅಪಹರಣ ಮತ್ತು ಕಿಡ್ನಾಪ್ ಪ್ರಕರಣಗಳು ಶೇ.20.1ರಷ್ಟಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.9.2ರಷ್ಟಿವೆ.

















