ನಾಳೆಯಿಂದ ಬೆಂಗಳೂರು–ಮಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ ಶುರು: ಪ್ರಯಾಣದ ಅವಧಿ 5 ಗಂಟೆ ಕಡಿಮೆಯಾಗುವ ನಿರೀಕ್ಷೆ

ಮಂಗಳೂರು: ಅಂತೂ ಇಂತೂ ಕರಾವಳಿ ಕರ್ನಾಟಕದ ಜನರ ಬಹುದಿನಗಳ ನಿರೀಕ್ಷೆಯಾಗಿದ್ದ ಬೆಂಗಳೂರು–ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಜೂನ್ 1ರಿಂದ ಪ್ರಾಯೋಗಿಕವಾಗಿ ಆರಂಭವಾಗಲಿದ್ದು, ಯಶಸ್ವಿ ಪರೀಕ್ಷೆಗಳ ಬಳಿಕ ವಾಣಿಜ್ಯ ಸಂಚಾರಕ್ಕೆ ಹಸಿರು ನಿಶಾನೆ ಸಿಗುವ ನಿರೀಕ್ಷೆಯಿದೆ.

ಪ್ರಸ್ತುತ ಶಿರಾಡಿ ಘಾಟ್ ಮಾರ್ಗದ ಮೂಲಕ ಬೆಂಗಳೂರು ಮತ್ತು ಮಂಗಳೂರು ನಡುವೆ ರಸ್ತೆ ಪ್ರಯಾಣಕ್ಕೆ 8ರಿಂದ 10 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. ಆದರೆ ವಂದೇ ಭಾರತ್ ರೈಲು ಸೇವೆ ಆರಂಭವಾದರೆ ಈ ಅವಧಿ ಸುಮಾರು 5 ಗಂಟೆಗಳಿಗೆ ಇಳಿಯುವ ಸಾಧ್ಯತೆ ಇದೆ.

ರೈಲ್ವೆ ಸಚಿವಾಲಯದ ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆ (RDSO) ತಂಡವು ಜೂನ್ 1ರಿಂದ ಹೈ-ಸ್ಪೀಡ್ ಟ್ರಯಲ್‌ಗಳನ್ನು ನಡೆಸಲಿದೆ. ವಿವಿಧ ಲೋಡ್‌ಗಳ ರೈಲುಗಳ ಮೂಲಕ ತಾಂತ್ರಿಕ ಮತ್ತು ಸುರಕ್ಷತಾ ಪರೀಕ್ಷೆಗಳು ಸುಮಾರು ಒಂದು ವಾರ ನಡೆಯಲಿದ್ದು, ವರದಿ ಆಧರಿಸಿ ಅಂತಿಮ ಅನುಮತಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 23ರಂದು ಮಂಗಳೂರಿಗೆ ಭೇಟಿ ನೀಡಿದ್ದ ಸಚಿವ ವಿ ಸೋಮಣ್ಣ V. Somanna ಅವರು ಜೂನ್ ತಿಂಗಳಲ್ಲೇ ವಂದೇ ಭಾರತ್ ಸೇವೆ ಆರಂಭಿಸುವುದಾಗಿ ಘೋಷಿಸಿದ್ದರು. ಮೈಸೂರು ವಿಭಾಗದ ಡಿಆರ್‌ಎಂ Mudit Mittal ಕೂಡ ಸಿದ್ಧತಾ ಕಾರ್ಯಗಳು ಅಂತಿಮ ಹಂತದಲ್ಲಿವೆ ಎಂದು ದೃಢಪಡಿಸಿದ್ದಾರೆ.

ಸವಾಲಿನ ರೈಲು ಮಾರ್ಗ:

ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ನಡುವಿನ 55 ಕಿಲೋಮೀಟರ್ ಘಾಟ್ ವಿಭಾಗ ದೇಶದ ಅತ್ಯಂತ ಸವಾಲಿನ ರೈಲು ಮಾರ್ಗಗಳಲ್ಲಿ ಒಂದಾಗಿದೆ. ಈ ಮಾರ್ಗದಲ್ಲಿ 57 ಸುರಂಗಗಳು, 258 ಸೇತುವೆಗಳು ಹಾಗೂ 108 ತೀವ್ರ ತಿರುವುಗಳಿದ್ದು, ಭೂಕುಸಿತದ ಅಪಾಯವೂ ಹೆಚ್ಚಾಗಿದೆ. ರೈಲ್ವೆ ಇಲಾಖೆ ಸುಮಾರು ₹93.55 ಕೋಟಿ ವೆಚ್ಚದಲ್ಲಿ ಈ ವಿಭಾಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಳಿಸಿದೆ. ಖಾಲಿ ಎಲೆಕ್ಟ್ರಿಕ್ ರೈಲಿನ ಪ್ರಾಯೋಗಿಕ ಸಂಚಾರವೂ ಯಶಸ್ವಿಯಾಗಿ ನಡೆದಿದೆ.

ಸುಮಾರು 400 ಕಿಲೋಮೀಟರ್ ವ್ಯಾಪ್ತಿಯ ಮೈಸೂರು–ಹಾಸನ–ಮಂಗಳೂರು ವಿದ್ಯುದೀಕರಣ ಯೋಜನೆಯ ವೆಚ್ಚ ಆರಂಭಿಕ ₹461.23 ಕೋಟಿಯಿಂದ ₹729.28 ಕೋಟಿಗೆ ಏರಿಕೆಯಾಗಿದೆ. ಈ ಮಾರ್ಗದಲ್ಲಿ ಗಂಟೆಗೆ 120 ಕಿಲೋಮೀಟರ್ ವೇಗದ ಸಂಚಾರಕ್ಕೆ ಅನುಕೂಲವಾಗುವ ಆಧುನಿಕ ಓವರ್‌ಹೆಡ್ ವಿದ್ಯುದೀಕರಣ ವ್ಯವಸ್ಥೆ ಅಳವಡಿಸಲಾಗಿದೆ.

ವಂದೇ ಭಾರತ್ ಸೇವೆ ಆರಂಭವಾದರೆ ಬೆಂಗಳೂರು–ಕರಾವಳಿ ಸಂಪರ್ಕದಲ್ಲಿ ಮಹತ್ವದ ಬದಲಾವಣೆ ಉಂಟಾಗಲಿದೆ. ಉಡುಪಿ, ಮಂಗಳೂರು, ಕಾರವಾರ ಸೇರಿದಂತೆ ಕರಾವಳಿ ಪ್ರದೇಶಗಳ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದ್ದು, ರಸ್ತೆ ಪ್ರಯಾಣದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ.

ಇದಲ್ಲದೆ, ಕಾರ್ಯಾಚರಣೆಯ ಸಾಧ್ಯತೆಗಳನ್ನು ಪರಿಶೀಲಿಸಿ ಈ ಸೇವೆಯನ್ನು ಗೋವಾದ ಮಡಗಾಂವ್‌ವರೆಗೆ ವಿಸ್ತರಿಸುವ ಚಿಂತನೆಯೂ ರೈಲ್ವೆ ಇಲಾಖೆಯಲ್ಲಿ ನಡೆಯುತ್ತಿದೆ. ಪ್ರಾಯೋಗಿಕ ಸಂಚಾರ ಯಶಸ್ವಿಯಾದರೆ ಇದು ಕರ್ನಾಟಕ ರೈಲ್ವೆ ಇತಿಹಾಸದ ಪ್ರಮುಖ ಮೈಲಿಗಲ್ಲಾಗಲಿದೆ.