ಬೆಳ್ತಂಗಡಿ: ಮಕ್ಕಳ ಜೊತೆಗಿನ ಮುನಿಸಿನಿಂದ ಮನೆ ಬಿಟ್ಟು ಬಂದಿದ್ದ 89 ವರ್ಷದ ವೃದ್ಧರೊಬ್ಬರು ಧರ್ಮಸ್ಥಳದ ಖಾಸಗಿ ವಸತಿಗೃಹದಲ್ಲಿ ಆತ್ಮಹತ್ಯೆಗೆ ಯತ್ನಿಸಿ ಬಳಿಕ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ತಂದೆ ಮೃತ ಪಟ್ಟ ವಿಚಾರವನ್ನು ಪೊಲೀಸರ ಮೂಲಕ ಮಕ್ಕಳಿಗೆ ತಿಳಿಸಿಲಾಗಿದೆ. ಆದರೆ ತಂದೆಯ ಮೃತದೇಹವನ್ನು ಪಡೆದುಕೊಳ್ಳಲು ಮಕ್ಕಳು ನಿರಾಕರಿಸಿದ್ದಾರೆ.
ಮೂಲತಃ ಬೆಂಗಳೂರಿನ ಹೊಯ್ಸಳ ನಗರದ ಸುಂಕದ ಕಟ್ಟೆ ನಿವಾಸಿಯಾಗಿರುವ ಹೆಚ್.ವಿ.ಚಂದ್ರ ಶೇಖರ್ ಧರ್ಮಸ್ಥಳಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡವರು. ಐವರು ಮಕ್ಕಳನ್ನು ಹೊಂದಿರುವ ಇವರು ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯಿಂದ ಅಸಮಧಾನಗೊಂಡು ಧರ್ಮಸ್ಥಳಕ್ಕೆ ಬಂದಿದ್ದಾರೆ. ಖಾಸಗಿ ಲಾಡ್ಜ್ ಒಂದರಲ್ಲಿ ರೂಮ್ ಪಡೆದಿದ್ದ ಚಂದ್ರಶೇಖರ್ ಆತ್ಮಹತ್ಯೆಗೆ ಯತ್ನಿಸಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಇದ್ದನ್ನು ಗಮನಿಸಿದ ರೂಮ್ ಬಾಯ್ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಧರ್ಮಸ್ಥಳ ಪೊಲೀಸರು ಚಂದ್ರಶೇಖರ್ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾರೆ.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಅವರಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು ಸಂಬಂಧಿಗಳಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ತಂದೆ ಮೃತರಾದ ಮಾಹಿತಿ ಸಿಕ್ಕರೂ ತಂದೆಯ ಮೃತ ದೇಹ ನಮಗೆ ಬೇಡ ಎಂದು ಮಕ್ಕಳು ಹೇಳಿದ್ದಾಗಿ ತಿಳಿದುಬಂದಿದೆ. ಮಕ್ಕಳು ಮೃತ ದೇಹ ಪಡೆಯಲು ಬಾರದ ಹಿನ್ನಲೆಯಲ್ಲಿ ಮೃತ ದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆ.