ಬೆಂಗಳೂರು: ಉದ್ಯೋಗಕ್ಕಾಗಿ ದೇಶದ ವಿವಿಧ ಭಾಗಗಳಿಂದ ಜನರು ಬೆಂಗಳೂರಿಗೆ ಬರುತ್ತಾರೆ. ಆದರೆ, ಬೆಂಗಳೂರಿನಲ್ಲಿ ಪ್ರಕಟವಾದ ಖಾಸಗಿ ಕಂಪನಿಯೊಂದರ ಉದ್ಯೋಗ ಜಾಹೀರಾತಿನಲ್ಲಿ ‘ತಮಿಳುನಾಡು ಮೂಲದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು’ ಎಂಬ ಷರತ್ತು ವಿಧಿಸಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು, ಕೊಯಮತ್ತೂರು ಹಾಗೂ ನಮಕ್ಕಲ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕಂಪನಿಯೊಂದರ ಜನರಲ್ ಮ್ಯಾನೇಜರ್ ಹಾಗೂ ಎಚ್ಆರ್ ಟೀಮ್ ಹೆಡ್ ಬಾಲ ಎಂ. ಅವರು ವೃತ್ತಿಪರ ಜಾಲತಾಣ ಲಿಂಕ್ಡ್ಇನ್ನಲ್ಲಿ ಡೇಟಾ ಅನಾಲಿಸ್ಟ್ ಹುದ್ದೆಗೆ ಉದ್ಯೋಗ ಜಾಹೀರಾತು ಪ್ರಕಟಿಸಿದ್ದರು. ಜಾಹೀರಾತಿನಲ್ಲಿ ಕೆಲಸದ ಸ್ಥಳವನ್ನು ಬೆಂಗಳೂರು ಎಂದು ನಮೂದಿಸಲಾಗಿದ್ದು, ಆದರೆ ಹುದ್ದೆಗೆ ತಮಿಳುನಾಡು ಮೂಲದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು ಎನ್ನಲಾಗಿದೆ.
ಉದ್ಯೋಗ ಜಾಹೀರಾತಿನ ಸ್ಕ್ರೀನ್ಶಾಟ್ಗಳು ಬಳಿಕ ಎಕ್ಸ್ (ಟ್ವಿಟರ್) ಹಾಗೂ ರೆಡ್ಡಿಟ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ತಾರತಮ್ಯದ ಆರೋಪ
‘ಬೆಂಗಳೂರಿನಲ್ಲಿ ಕಂಪನಿ ನಡೆಸಲು ಕರ್ನಾಟಕದ ಭೂಮಿ ಮತ್ತು ಮೂಲಸೌಕರ್ಯ ಬಳಸಿಕೊಂಡು, ಉದ್ಯೋಗ ನೀಡುವಾಗ ಸ್ಥಳೀಯ ಕನ್ನಡಿಗರನ್ನು ಕಡೆಗಣಿಸುವುದು ಏಕೆ?’ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಸ್ಥಳೀಯ ಅಭ್ಯರ್ಥಿಗಳ ವಿರುದ್ಧ ಪ್ರಾದೇಶಿಕ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ಬೆಂಗಳೂರಿನಲ್ಲಿ ಇಂತಹ ಉದ್ಯೋಗ ಜಾಹೀರಾತುಗಳ ಕುರಿತು ಈ ಹಿಂದೆಯೂ ವಿವಾದಗಳು ಉಂಟಾಗಿದ್ದವು. ಕೆಲ ತಿಂಗಳ ಹಿಂದೆ ಜೆ.ಪಿ. ನಗರದ ಕಂಪನಿಯೊಂದು ‘ಕನ್ನಡಿಗೇತರರಿಗೆ ಮಾತ್ರ ಆದ್ಯತೆ’ ಎಂಬ ರೀತಿಯ ಉದ್ಯೋಗ ಜಾಹೀರಾತು ಪ್ರಕಟಿಸಿದ್ದು, ಬಳಿಕ ಕನ್ನಡಿಗರ ಆಕ್ರೋಶದ ಹಿನ್ನೆಲೆಯಲ್ಲಿ ಕ್ಷಮೆಯಾಚಿಸಿತ್ತು ಎನ್ನಲಾಗಿದೆ.
ಇದೀಗ ಬೆಂಗಳೂರಿನ ಮತ್ತೊಂದು ಕಂಪನಿಯ ಉದ್ಯೋಗ ಜಾಹೀರಾತು ವಿವಾದಕ್ಕೆ ಕಾರಣವಾಗಿದ್ದು, ಖಾಸಗಿ ವಲಯದಲ್ಲೂ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಕುರಿತು ಕಾನೂನು ರೂಪಿಸಬೇಕು ಎಂಬ ಬೇಡಿಕೆಗೆ ಈ ಘಟನೆ ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ.















