ಮಂಗಳೂರು: ಕಳೆದ ಕೆಲ ದಿನಗಳ ಹಿಂದೆ ಪಶ್ಚಿಮ ಘಟ್ಟದಲ್ಲಿ ಸಂಭವಿಸಿದ ಮೇಘ ಸ್ಫೋಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಲವು ಗ್ರಾಮಗಳು ತತ್ತರಿಸಿ ಹೋಗಿವೆ.
ನೆರೆಯ ಅಬ್ಬರಕ್ಕೆ ಊರಿಗೆ ಊರೇ ಮುಳುಗಿದ್ದು, 250ಕ್ಕೂ ಅಧಿಕ ಮನೆಗಳು ನೆಲಕ್ಕೆ ಉರುಳಿವೆ. ಬದುಕಿಗೆ ಮೂಲಾಧರವಾದ ಕೃಷಿ ನೆಲಕಚ್ಚಿದ್ದು ಬದುಕು ಅಕ್ಷರಶ: ಬೀದಿ ಪಾಲಾಗಿವೆ. ಸಾಕಷ್ಟು ಕುಟುಂಬಗಳು ಮನೆಯೂ ಇಲ್ಲದೇ ಹಾಗೂ ಇದ್ದರೂ ವಾಸಿಸಲಾಗದ ಸ್ಥಿತಿ ಬಂದೊಗಿದೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಚಾರ್ಮಾಡಿ, ದಿಡುಪೆ ಮುಂತಾದ ಗ್ರಾಮದ ನೂರಾರು ಮನೆಗಳು ಸರ್ವನಾಶವಾಗಿವೆ.
ಇಲ್ಲಿ ಪಶ್ಚಿಮ ಘಟ್ಟದ ಬೆಟ್ಟಗಳೇ ಕುಸಿದು ನೀರಿನೊಂದಿಗೆ ಕೊಚ್ಚಿಕೊಂಡು ಬಂದಿವೆ. ಘಟ್ಟದ ನೂರಾರು ಮರಗಳು ನದಿಯಲ್ಲಿ ತೇಲಿ ಬಂದು ಮನೆ, ಸೇತುವೆಗಳನ್ನು ದ್ವಂಸ ಮಾಡಿ ಹಾಕಿದೆ.
ಈ ಮಧ್ಯೆ ದಿಡುಪೆಯಲ್ಲಿನ ದೈವದ ಗುಡಿಯೊಂದು ಸ್ವಲವೂ ಹಾನಿಯಾಗದೇ ಸುರಕ್ಷಿತವಾಗಿ ಉಳಿದಿದೆ. ರಕ್ತೇಶ್ವರಿ ಹಾಗೂ ಗುಳಿಗ ದೈವದ ಕಟ್ಟೆ ಇದಾಗಿದ್ದು, ಸ್ವಲ್ಪವೂ ಹಾನಿಯಾಗದೇ ಇದು ಉಳಿದಿರುವುದು ವಿಸ್ಮಯಕ್ಕೆ ಕಾರಣವಾಗಿದೆ.
ಈ ಗುಡಿಯ ನಾಲ್ಕು ಸುತ್ತು ಸರ್ವನಾಶ ಆಗಿ ಹೋಗಿದೆ. ಈ ಗುಡಿಯ ಸುತ್ತಮುತ್ತ ಮನೆ ಹಾಗೂ ಕೃಷಿ ಭೂಮಿ ಇದ್ದು ಆಗಸ್ಟ್ 9ರ ರಾತ್ರಿ ಸಂಭವಿಸಿದ ಪ್ರವಾಹಕ್ಕೆ ಎಲ್ಲವೂ ನೆಲಸಮವಾಗಿದೆ. ಗುಡ್ಡ ಕುಸಿದು ಮರಗಳು ಬೆಂಕಿ ಕಡ್ಡಿಗಳಂತೆ ನೀರಿನಲ್ಲಿ ತೇಲಿ ಬಂದು ಮನುಷ್ಯನ ಊಹೆಗೂ ಮೀರಿ ಹಾನಿ ಮಾಡಿದೆ.
ಈ ದೈವ ಗುಡಿಯ ಸುತ್ತ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದ ಮರಗಳು ರಾಶಿ ಬಿದ್ದಿದೆ. ಆದರೆ ಇದ್ಯಾವುದು ಗುಡಿಗೆ ಹಾನಿ ಉಂಟು ಮಾಡಿಲ್ಲ. ತುಳುನಾಡಿನ ದೈವಗಳ ಕಾರಣೀಕತೆಯನ್ನು ಇದು ತೋರಿಸುತ್ತದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲಿ ಗುಳಿಗ ಹಾಗೂ ರಕ್ತೇಶ್ವರಿ ದೈವಗಳ ಸಾನಿಧ್ಯ ಇರುವುದರಿಂದಲೇ ಈ ರೀತಿಯ ಪವಾಡ ಸಂಭವಿಸಿದೆ ಎನ್ನುವ ಒಕ್ಕಣೆಯುಳ್ಳ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುಳುನಾಡು ದೈವಗಳ ಬೀಡು. ಇಲ್ಲಿನ ಆಸ್ತಿಕರು ದೇವರಷ್ಟೇ ಅದಕ್ಕಿಂತ ಒಂದು ಚೂರು ಜಾಸ್ತಿ ಭಯ – ಭಕ್ತಿಯನ್ನು ದೈವಗಳಲ್ಲಿ ತೋರಿಸುತ್ತಾರೆ.
ಈ ದೈವಗಳು ಹತ್ತು ಹಲವು ಕಾರಣೀಕಗಳನ್ನು ಪ್ರಕಟಿಸುವ ಮೂಲಕ ಭಕ್ತರನ್ನು ರಕ್ಷಿಸಿದೆ. ತಪ್ಪು ಮಾಡಿದಾಗ ತಿದ್ದಿದೆ ಎಂಬ ನಂಬಿಕೆ ಇಲ್ಲಿಯ ಜನಸಾಮಾನ್ಯರದ್ದು. ಈ ದೈವ್ಯಗಳು ಪ್ರಕೃತಿಯ ಜತೆಗೆ ಅರಾಧಿಸಲ್ಪಡುತ್ತವೆ.