ಬೆಳ್ಮಣ್: ಜೂನ್‌ 17ರಿಂದ ಅಂತರ್ಜಲ ಹೆಚ್ಚಳ, ನಮ್ಮ ಛಲ- ರೈತರೊಂದಿಗೆ ಸಂವಾದ

ಕಾರ್ಕಳ: ಭಾರತೀಯ ಕಿಸಾನ್‌ ಸಂಘ ಕಾರ್ಕಳ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಗ್ರಾ.ಪಂ.ಗಳ ಸಹಭಾಗಿತ್ವದಲ್ಲಿ ಬೆಳ್ಮಣ್‌ ಜಿ.ಪಂ. ವ್ಯಾಪ್ತಿಯ ಏಳು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಡಿಲು ಗದ್ದೆಗಳಲ್ಲಿ ಮುಂಗಾರು ಭತ್ತದ ಬೆಳೆ, ಕೃಷಿ ಹೊಂಡ, ಇಂಗು ಗುಂಡಿ, ಮಳೆ ಕೊಯ್ಲು, ಫಸಲ್ ಬಿಮಾ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಮ್ಮಾನ ಯೋಜನೆಗಳ ಮಾಹಿತಿ ಹಾಗೂ ಅರ್ಜಿ ಸ್ವೀಕಾರ ವಿವಿಧ ಕಡೆಗಳಲ್ಲಿ ಜೂ.17 ರಿಂದ 21ರ ವರೆಗೆ ನಡೆಯಲಿದೆ ಎಂದು ಬೆಳ್ಮಣ್‌ ಜಿ.ಪಂ. ಸದಸ್ಯೆ ರೇಷ್ಮಾ ಉದಯ್‌ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜೂ. 17ರಂದು 4 ಗಂಟೆಗೆ ಇನ್ನಾ ಹಾಲು ಉತ್ಪಾದಕರ ಸಂಘ, ಜೂ. 18, ಬೆಳಗ್ಗೆ 10 ಗಂಟೆಗೆ ಬೋಳ ಗ್ರಾ.ಪಂ. ಸಭಾಂಗಣದಲ್ಲಿ, ಸಂಜೆ 4 ಗಂಟೆಗೆ ಮುಂಡ್ಕೂರು ಹಾಲು ಉತ್ಪಾದಕರ ಸಂಘದಲ್ಲಿ, ಜೂ. 19-4 ಗಂಟೆಗೆ ಬೆಳ್ಮಣ್‌ ಪುನರ್‌ ಕೆರೆ ಹಾಲು ಉತ್ಪಾದಕರ ಸಂಘದಲ್ಲಿ, ಜೂ. 20-4 ಗಂಟೆಗೆ ಸೂಡ ಸುಬ್ರಹ್ಮಣ್ಯ ದೇಗುಲದಲ್ಲಿ, ಜೂ. 21- ಬೆಳಗ್ಗೆ 10 ಗಂಟೆಗೆ ನಿಟ್ಟೆ ಗ್ರಾ.ಪಂ. ಸಭಾಂಗಣದಲ್ಲಿ ಹಾಗೂ ಜೂ. 21ರ ಸಂಜೆ 4 ಗಂಟೆಗೆ ನಂದಳಿಕೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರೈತರ ಸಂವಾದ ಹಾಗೂ ಮಾಹಿತಿ ಕಾರ್ಯಕ್ರಮ ಜರಗಲಿದೆ.
ಹಡೀಲು ಗದ್ದೆಗಳನ್ನು ರೈತರು ಸದುಪಯೋಗಪಡಿಸಿ, ಗದ್ದೆಗಳನ್ನು ಮತ್ತೆ ಭತ್ತದ ಕೃಷಿ‌ ಮಾಡುವಂತಾಗಬೇಕು. ರೈತರು ಕೃಷಿಯಿಂದ ಹಿಂದೆ ಸರಿಯದಂತೆ ಮುಂಗಾರು ಭತ್ತದ ಬೆಳೆಯನ್ನು ಮಾಡುವಲ್ಲಿ ರೈತರಿಗೆ ಸಂಪೂರ್ಣ ಸಹಕಾರ ನೀಡುವ ಜತೆಗೆ ಅಂತರ್ಜಲ ವೃದ್ಧಿಗೆ ಪೂರಕ ಯೋಜನೆಗಳ ಬಗ್ಗೆ ಮಾಹಿತಿಯನ್ನು ಜಿ.ಪಂ. ವತಿಯಿಂದ ಜೋಸೆಫ್‌ ರೆಬೆಲ್ಲೋ ಅವರು ನೀಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ತಾ.ಪಂ. ಉಪಾಧ್ಯಕ್ಷ ಗೋಪಾಲ ಮೂಲ್ಯ, ಮುಂಡ್ಕೂರು ಗ್ರಾ.ಪಂ. ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಮುಲ್ಲಡ್ಕ ಪರಾಡಿ, ಭಾರತೀಯ ಕಿಸಾನ್‌ ಸಂಘದ ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್‌, ಸಂಘದ ಕಾರ್ಕಳ ತಾಲೂಕು ಪ್ರ. ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.