ಮಣಿಪಾಲ: ಮಕ್ಕಳೊಂದಿಗೆ ಮಗುವಾಗಿ ಮಿತ್ರನಾಗಿ ಸಮಾನ ಮನಸ್ಕರಾಗಿ ಸಮನ್ವಯಕಾರನಾಗಿ ಸಮಸ್ಯೆಗಳ ಪರಿಹಾರಕನಾಗಿ ಗುರು ದುಡಿದರೆ ತನ್ನ ಶಿಷ್ಯನಲ್ಲಿ ಅಡಗಿರುವ ಪ್ರತಿಭೆಯನ್ನು ಅರಳಿಸಬಹುದು.
ಗುರು ಎನ್ನುವುದು ಗುರುತರ ಜವಾಬ್ದಾರಿಯನ್ನು ಹೊಂದಿರುವ ಸ್ಥಾನ. ಪ್ರಪಂಚದ ಆಗುಹೋಗುಗಳ ಸ್ಪಷ್ಟೀಕರಣ ಕೊಡುವ, ಸತ್ಯವನ್ನು ಹುಡುಕುವ ಪ್ರಯತ್ನ ಮತ್ತು ಉತ್ಸಾಹವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಆತನ ಆದ್ಯ ಕರ್ತವ್ಯ. ಅಸಾಧ್ಯವಾದುದನ್ನು ಸಾಧಿಸುವ ಛಲವು ಬೆಳವಣಿಗೆಗೆ ಮಾರಕವಾಗಬಹುದು. ಸಾಧ್ಯವಿರುವ ಗುರಿಯಡೆಗೆ ಸ್ಪಷ್ಟತೆ ಮತ್ತು ಸಿದ್ಧತೆ ಮಾಡಿಕೊಡುವ ಕೌಶಲ್ಯ ಗುರುವಿಗಿರಬೇಕಾಗುತ್ತದೆ ಎಂದು ಕಂಪ್ಯೂಟರ್ ವಿಜ್ಞಾನಿ ಫ್ರೊ. ಕೆ.ವಿ.ರಾವ್ ಅವರು ಹೇಳಿದರು.
ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ ವತಿಯಿಂದ ನಡೆದ ಗುರುಪೂರ್ಣಿಮಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿದರು.
ಸಾವಿರಾರು ಜ್ಞಾನದಾಹಿಗಳಿಗೆ ಗುರುವಾಗಿ, ಗಣಕಯಂತ್ರದ ಭಾರತೀಯ ಭಾಷೆಗಳ ಕೀಲಿಮಣೆಯ ಪಿತಾಮಹನೆಂದು ಕರೆಯಲ್ಪಡುವ ಪ್ರೊ.ಕೆ.ವಿ.ರಾವ್ ಅವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ರೋ. ನಿತ್ಯಾನಂದ ನಾಯಕ್ ವಹಿಸಿದ್ದರು. ರೋ. ಸಚ್ಚಿದಾನಂದ ವಿ. ನಾಯಕ್ ಅವರು ಅತಿಥಿಗಳ ಪರಿಚಯ ಮಾಡಿಸಿದರು. ಮಣಿಪಾಲ ಹಿಲ್ಸ್ ರೋಟರಿ ಅಧ್ಯಕ್ಷೆ ರೋ. ಸವಿತಾ ಭಟ್ ಉಪಸ್ಥಿತರಿದ್ದರು. ರೋ. ದೀಪಕರಾಮ್ ಬಾಯರಿ ವಂದಿಸಿದರು.