ಬೀಜಾಡಿ ಸರ್ವೀಸ್ ರಸ್ತೆ ಕಾಮಗಾರಿ ವಿಳಂಬ: ಜಿಲ್ಲಾಧಿಕಾರಿ ಭೇಟಿ: ಗುತ್ತಿಗೆ ಕಂಪೆನಿ ಅಧಿಕಾರಿಗಳಿಗೆ ಎಚ್ಚರಿಕೆ

ಕುಂದಾಪುರ: ಕಳೆದ ಹಲವು ದಿನಗಳಿಂದ ಬೀಜಾಡಿ ಸರ್ವೀಸ್ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳದ ಗುತ್ತಿಗೆ ಕಂಪೆನಿ ವಿರುದ್ದ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳೀಯರ ದೂರಿನ ಮೇರೆಗೆ ನವಯುಗ ಕಂಪನಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಬಂದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಬೀಜಾಡಿ ಸರ್ವೀಸ್ ರಸ್ತೆ ಯೂ ಟನ್‌ನಿಂದ ಬೀಜಾಡಿ ವೈ ಜಂಕ್ಷನ್ ತಿರುವು ತನಕ ಕಾಲ್ನಡಿಗೆಯಲ್ಲಿ ತೆರಳಿ ಸ್ವತಃ ಪರಿಶೀಲನೆ ನಡೆಸಿ ಕಂಪನಿ ಇಂಜಿನಯರ್‌ಗಳನ್ನು  ತರಾಟೆಗೆ ತೆಗೆದುಕೊಂಡರು. ದಿನನಿತ್ಯ ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಹಾಗೂ ವಯೋವೃದ್ಧರು ಸೇರಿದಂತೆ ಸ್ಥಳೀಯರೂ ತಿರುಗಾಡುತ್ತಾರೆ. ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಯಾವುದೇ ಸೇಪ್ ಗಾರ್ಡ್‌ಗಳಿಲ್ಲ, ಇಷ್ಟೊಂದು ಅಪಾಯಕಾರಿ ಇರುವಾಗ ಕಾಲಾವಕಾಶ ಕೊಡುವ ಪ್ರಶ್ನೆಯೇ ಇಲ್ಲ ಎಂದು ಗುತ್ತಿಗೆ ಕಂಪೆನಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಸೋಮವಾರದಂದು ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೆ ಕಂಪನಿಯನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಿ ಕಾನೂನೂತ್ಮಾಕ ಕೇಸುಗಳನ್ನು ದಾಖಲಿಸುವುದರ ಮೂಲಕ ತುರ್ತು ಕ್ರಮ ಕೈಗೊಳ್ಳುತ್ತೇನೆ ಎಂದು ಇದೇ ಸಂದರ್ಭದಲ್ಲಿ ಖಡಕ್ ಆದೇಶ ನೀಡಿದ್ದಾರೆ. ಡಿಸಿ ಭೇಟಿ ವೇಳೆ ತಹಶೀಲ್ದಾರ್ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.