ಕುಂದಾಪುರ: ಬೀಜಾಡಿ ಸರ್ವಿಸ್ ರಸ್ತೆ ಕಾಮಗಾರಿ ಆರಂಭ ಮಾಡುವುದಕ್ಕೆ , ಅನೇಕ ಬಾರಿ ನಡೆದ ಹೋರಾಟದ ಫಲವಾಗಿ ಫೆ.6 ರಂದು ಕಾಮಗಾರಿ ಕೈಗೆತ್ತಿಕೊಂಡಿದ್ದು ನವಯುಗ ಕಂಪನಿ ಕಾರ್ಮಿಕರ ಮುಷ್ಕರದಿಂದಾಗಿ ಪುನಃ ಕಾಮಗಾರಿ ಸ್ಥಗಿತಗೊಂಡಿತ್ತು. ಇದರಂತೆ ಬುಧವಾರ ಬೀಜಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿ ನೇತೃತ್ವದಲ್ಲಿ ಉಡುಪಿ ಜಿಲ್ಲಾ ನೂತನ ಜಿಲ್ಲಾಧಿಕಾರಿ ಯವರಿಗೆ ದೂರು ನೀಡಿ ಸ್ಥಳೀಯ ಸಮಸ್ಯೆಗಳನ್ನು ಮನದಟ್ಟು ಮಾಡಿ ಮನವಿ ಸಲ್ಲಿಸಲಾಗಿದೆ.
ಬೀಜಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿ ಸಂಚಾಲಕ ರಾಜು ಬೆಟ್ಟಿನಮನೆ ಮನವಿ ಸಲ್ಲಿಸಿ, ಶೀಘ್ರವಾಗಿ ರಸ್ತೆ ಕಾರ್ಯ ಮುಗಿಸದಿದ್ದಲ್ಲಿ ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಿಗಳು ತಲ್ಲಿನ ರಾಗುತ್ತಾರೆ. ಆದರಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗುದರಲ್ಲಿ ಯಾವುದೇ ಸಂದೇಹವಿಲ್ಲ. ಮೊದಲೇ ನವಯುಗ ಕಂಪನಿಯ ಸಿಬ್ಬಂದಿಗಳಿಗೆ ಸಂಬಳ ಬಂದಿಲ್ಲ ಎಂಬ ಕಾರಣಕ್ಕೆ ಮುಷ್ಕರ ಆರಂಭಿಸಿದ್ದಾರೆ. ಇದಾಗಿಯೂ ಮುಂದೆ ಮಳೆಗಾಲದ ಅವಧಿಯಲ್ಲಿ ಸ್ಥಳೀಯ ನೆರೆ ಹಾವಳಿಯಿಂದ ರಾಷ್ಟ್ರೀಯ ಹೆದ್ದಾರಿ ಕುಸಿಯುವ ಹಂತಕ್ಕೆ ಬರುತ್ತದೆ. ಮುಂದಾಗುವ ಅವಘಡಗಳನ್ನು ತಡೆಯುವದೊಂದಿಗೆ ಜಿಲ್ಲಾ ಆಡಳಿತ ತುರ್ತು ಕ್ರಮ ಕೈಗೊಳ್ಳಬೇಕು. ಇದಾಗಿಯೂ ಕಾಮಗಾರಿ ಬಾಕಿ ಉಳಿದಲ್ಲಿ ಸ್ಥಳೀಯ ಗ್ರಾಮಸ್ಥರೂ ಮುಂದೆ ಬರುವ ಲೋಕಸಭಾ ಚುನಾವಣೆ ಬಹಿಷ್ಕರಿಸುವರೆಂದು ತೀರ್ಮಾನಿಸಿದ್ದಾರೆ ಎಂದು ತಿಳಿಸಿದರು.
ಮನವಿ ಸ್ವೀಕರಿಸದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ನಾನು ಅಧಿಕಾರ ವಹಿಸಿ ಕೆಲವು ದಿನಗಳಾದರೂ ಕೂಡ ಕುಂದಾಪುರ ಭಾಗದ ಅನೇಕ ಸಮಸ್ಯೆಗಳನ್ನು ಅರಿತಿದ್ದೇನೆ. ಇದರಿಂದ ಸಾಕಷ್ಟು ಮಾಹಿತಿ ಪಡೆದುಕೊಂಡಿದ್ದು ಮುಂದಿನ 3 ದಿನಗಳಲ್ಲಿ ಸಂಬಂದಪಟ್ಟ ಇಲಾಖೆಯೊಂದಿಗೆ ಸಭೆ ಕರೆಯಲಾಗಿದ್ದು ತುರ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿ ಪ್ರಮುಖರಾದ ನಾರಾಯಣ ಬಂಗೇರ ಬೀಜಾಡಿ, ಜ್ವಾಲಿ ಫೆಂಡ್ಸ್ ಪ್ರಮುಖರಾದ ಅಶೋಕ್ ಬೀಜಾಡಿ, ಅಣ್ಣಪ್ಪ ಬೆಟ್ಟಿನಮನೆ, ಮೂಡುಗೋಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಸಿದ್ಧೀಕ್ ಮೂಡುಗೋಪಾಡಿ, ದಿನೇಶ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.