ದ್ರಾಕ್ಷಿ ತಿನ್ನುವ ಮುನ್ನ ಎಚ್ಚರ: ಸರಿಯಾಗಿ ತೊಳೆಯದಿದ್ದರೆ ಆರೋಗ್ಯಕ್ಕೆ ಅಪಾಯ!

ಹಸಿರು, ಕಪ್ಪು ದ್ರಾಕ್ಷಿಗಳನ್ನು ನೋಡುತ್ತಿದ್ದಂತೆಯೇ ಬಾಯಲ್ಲಿ ನೀರೂರುತ್ತದೆ. ಮನೆಗೆ ತಂದು ತೊಳಿಯುವಷ್ಟೂ ತಾಳ್ಮೆ ಇಲ್ಲದೇ ಕೆಲವೊಮ್ಮೆ ಹಾಗೇ ತಿಂದುಬಿಡುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ದೊರೆಯುವ ದ್ರಾಕ್ಷಿಗಳನ್ನು ನೀವು ಸರಿಯಾಗಿ ಗಮನಿಸಿದರೆ ಅದರ ಮೇಲೆ ಬಿಳಿ ಬಣ್ಣ ಕಾಣುತ್ತದೆ. ದ್ರಾಕ್ಷಿ ಮೇಲೆ ಕೀಟನಾಶಕಗಳ ಸಿಂಪಡಣೆ ಸಾಮಾನ್ಯ. ಸರಿಯಾಗಿ ತೊಳೆಯದೆ ತಿಂದರೆ, ಈ ರಾಸಾಯನಿಕಗಳು ದೇಹಕ್ಕೆ ಹಾನಿ ಉಂಟುಮಾಡುವ ಸಾಧ್ಯತೆ ಇದೆ.

ನೆನೆಸುವುದು ಉತ್ತಮ ವಿಧಾನ


ದ್ರಾಕ್ಷಿಯನ್ನು ಗೊಂಚಲಿನಿಂದ ಬೇರ್ಪಡಿಸಿ 10–15 ನಿಮಿಷ ನೀರಿನಲ್ಲಿ ನೆನೆಸಿಡುವುದು ಪರಿಣಾಮಕಾರಿ. ನಂತರ ಸ್ವಲ್ಪ ಕದಡಿ, ನೀರನ್ನು ಬದಲಿಸಿ ಮತ್ತೆ ತೊಳೆಯುವುದರಿಂದ ದೂಳು ಹಾಗೂ ಕಶ್ಮಲಗಳನ್ನು ತೆಗೆಯಬಹುದು.

ಅರಿಷಿಣ, ಉಪ್ಪು, ಸೋಡಾ ಅಥವಾ ವಿನೇಗರ್ ಬಳಕೆ


ಹೆಚ್ಚಿನ ಸ್ವಚ್ಛತೆಗೆ ನೀರಿಗೆ ಒಂದು ಚಮಚ ಉಪ್ಪು, ಅಡುಗೆ ಸೋಡಾ ಅಥವಾ ವಿನೇಗರ್ ಸೇರಿಸಿ ನೆನೆಸಬಹುದು. ಇದು ಬ್ಯಾಕ್ಟೀರಿಯಾ ಮತ್ತು ಕೀಟನಾಶಕದ ಅಂಶ/ಪರಿಣಾಮಗಳನ್ನು ಕಡಿಮೆ ಮಾಡಲು ಸಹಕಾರಿ. ಅರಿಶಿನ ಪುಡಿಯ ನೀರಲ್ಲಿ ನೆನೆಸುವುದು ಸಹ ಪರಿಣಾಮಕಾರಿ ಮಾರ್ಗ. ಇದರಿಂದಲೂ ಹಣ್ಣುಗಳನ್ನು ರೋಗಾಣು ಮತ್ತು ಕೀಟಗಳಿಂದ ಮುಕ್ತವಾಗಿಸಬಹುದು.

ಮತ್ತೆ ಶುದ್ಧ ನೀರಿನಲ್ಲಿ ತೊಳೆಯಿರಿ


ಉಪ್ಪು ಅಥವಾ ವಿನೇಗರ್ ಬಳಸಿ ತೊಳೆದ ಬಳಿಕ ಮತ್ತೆ ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆಯುವುದು ಅಗತ್ಯ. ಇಲ್ಲದಿದ್ದರೆ ಅವುಗಳ ರುಚಿ ಹಣ್ಣುಗಳಲ್ಲಿ ಉಳಿಯಬಹುದು.

ಸಂಗ್ರಹಿಸುವ ಮುನ್ನ ಒಣಗಿಸಿ


ತೊಳೆದ ದ್ರಾಕ್ಷಿಯನ್ನು ಸ್ವಚ್ಛ ಬಟ್ಟೆಯ ಮೇಲೆ ಹಾಸಿ ಒಣಗಿಸಿದ ಬಳಿಕ ಫ್ರಿಜ್‌ನಲ್ಲಿ ಇಟ್ಟರೆ ಹೆಚ್ಚು ದಿನ ತಾಜಾ ಇರುತ್ತದೆ.

ಸುರಕ್ಷಿತ ಸೇವನೆಗೆ ಸರಳ ಕ್ರಮ


ಸರಿಯಾದ ವಿಧಾನದಲ್ಲಿ ತೊಳೆಯುವುದರಿಂದ ದ್ರಾಕ್ಷಿಯನ್ನು ಸುರಕ್ಷಿತವಾಗಿ ಸೇವಿಸಬಹುದು. ಆರೋಗ್ಯದ ದೃಷ್ಟಿಯಿಂದ ಈ ಕ್ರಮಗಳನ್ನು ಅನುಸರಿಸುವುದು ಮುಖ್ಯ.