ನವದೆಹಲಿ: ನಿಮ್ಮ ಕೈಗೆ ₹10, ₹20 ಅಥವಾ ₹50 ಮುಖಬೆಲೆಯ ನೋಟು ಬಂದಾಗ ಇನ್ನು ಮುಂದೆ ಸ್ವಲ್ಪ ಎಚ್ಚರಿಕೆ ವಹಿಸುವುದು ಅಗತ್ಯ. ದೇಶದಲ್ಲಿ ನಕಲಿ ನೋಟು ಚಲಾವಣೆಯ ಜಾಲ ತನ್ನ ಕಾರ್ಯತಂತ್ರ ಬದಲಿಸಿಕೊಂಡಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಮಾಹಿತಿ ಕಲೆಹಾಕಿವೆ ಎಂದು ವರದಿಯಾಗಿದೆ.
ಈ ಹಿಂದೆ ನಕಲಿ ನೋಟು ದಂಧೆಕೋರರು ಹೆಚ್ಚಾಗಿ ₹200 ಮತ್ತು ₹500 ಮುಖಬೆಲೆಯ ನೋಟುಗಳನ್ನು ಗುರಿಯಾಗಿಸಿಕೊಂಡಿದ್ದರು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ₹500ರ ಖೋಟಾ ನೋಟುಗಳ ಚಲಾವಣೆ ಕಡಿಮೆಯಾಗಿದ್ದು, ಇದೀಗ ₹10, ₹20 ಮತ್ತು ₹50ರ ಸಣ್ಣ ಮುಖಬೆಲೆಯ ನೋಟುಗಳನ್ನು ಹೆಚ್ಚು ಪ್ರಮಾಣದಲ್ಲಿ ಚಲಾವಣೆಗೆ ತರುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.
ಸಣ್ಣ ನೋಟುಗಳನ್ನೇ ಏಕೆ ಗುರಿಯಾಗಿಸಲಾಗಿದೆ?
₹200 ಅಥವಾ ₹500ರ ನೋಟು ಕೈಗೆ ಬಂದಾಗ ಜನರು ಸಾಮಾನ್ಯವಾಗಿ ಅದರ ಭದ್ರತಾ ವೈಶಿಷ್ಟ್ಯಗಳನ್ನು ಪರಿಶೀಲಿಸುತ್ತಾರೆ. ಆದರೆ ₹10, ₹20 ಹಾಗೂ ₹50ರ ನೋಟುಗಳನ್ನು ಸ್ವೀಕರಿಸುವಾಗ ಅಷ್ಟಾಗಿ ಪರಿಶೀಲಿಸುವುದಿಲ್ಲ.
ಈ ಸಾರ್ವಜನಿಕ ನಿರ್ಲಕ್ಷ್ಯವನ್ನೇ ಬಳಸಿಕೊಂಡು ದಿನನಿತ್ಯದ ಸಣ್ಣಪುಟ್ಟ ವಹಿವಾಟುಗಳ ಮೂಲಕ ಖೋಟಾ ನೋಟುಗಳನ್ನು ಚಲಾವಣೆಗೆ ತರುವ ತಂತ್ರವನ್ನು ದಂಧೆಕೋರರು ಅನುಸರಿಸುತ್ತಿದ್ದಾರೆ ಎಂದು ವರದಿಯಾಗಿದೆ.
2027ರ ಏಪ್ರಿಲ್ವರೆಗೆ ಹೈ ಅಲರ್ಟ್
2028ರ ವೇಳೆಗೆ ಹೊಸ ಮಾದರಿಯ ಪಾಲಿಮರ್ ನೋಟುಗಳು ಪರಿಚಯವಾಗುವ ಮುನ್ನ ಹೆಚ್ಚಿನ ಪ್ರಮಾಣದಲ್ಲಿ ಸಣ್ಣ ಮುಖಬೆಲೆಯ ಕಾಗದದ ನಕಲಿ ನೋಟುಗಳನ್ನು ಚಲಾವಣೆಗೆ ತರುವ ಪ್ರಯತ್ನ ನಡೆಯಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ 2027ರ ಏಪ್ರಿಲ್ವರೆಗೆ ಅವಧಿಯನ್ನು ಭದ್ರತಾ ಸಂಸ್ಥೆಗಳು ಅತ್ಯಂತ ಸೂಕ್ಷ್ಮ ಅವಧಿ ಎಂದು ಪರಿಗಣಿಸಿ ನಿಗಾ ಹೆಚ್ಚಿಸಿವೆ ಎಂದು ವರದಿಯಾಗಿದೆ. ಹೊಸ ನೋಟುಗಳು ಜಾರಿಗೆ ಬಂದ ಬಳಿಕ ಖೋಟಾ ನೋಟು ಜಾಲವು ₹50 ಮತ್ತು ₹100 ಮುಖಬೆಲೆಯ ನೋಟುಗಳತ್ತ ಗಮನ ಹರಿಸುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
2028ರಲ್ಲಿ ಪಾಲಿಮರ್ ನೋಟು?
₹10 ಮತ್ತು ₹20 ಮುಖಬೆಲೆಯ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು 2028ರ ವೇಳೆಗೆ ಪರಿಚಯಿಸುವ ಯೋಜನೆ ಇದೆ ಎಂದು ವರದಿಯಾಗಿದೆ. ಪಾಲಿಮರ್ ನೋಟುಗಳು ಸಾಮಾನ್ಯ ಕಾಗದದ ನೋಟುಗಳಿಗಿಂತ ಹೆಚ್ಚು ಬಾಳಿಕೆ ಬರುವುದರ ಜೊತೆಗೆ, ಪಾರದರ್ಶಕ ವಿಂಡೋ, ಮೆಟಾಲಿಕ್ ಭದ್ರತಾ ಅಂಶಗಳು ಹಾಗೂ ಮೈಕ್ರೋ-ಆಪ್ಟಿಕ್ ಹೊಲೋಗ್ರಾಮ್ಗಳಂತಹ ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಹೊಂದುವ ನಿರೀಕ್ಷೆಯಿದೆ.
ಈ ವೈಶಿಷ್ಟ್ಯಗಳಿಂದ ಇಂತಹ ನೋಟುಗಳನ್ನು ನಕಲಿ ಮಾಡುವುದು ಹೆಚ್ಚು ಕಷ್ಟವಾಗಲಿದೆ ಎನ್ನಲಾಗಿದೆ.
ಹೀಗಾಗಿ ₹10, ₹20 ಮತ್ತು ₹50ರ ನೋಟುಗಳನ್ನೂ ನಿರ್ಲಕ್ಷ್ಯ ಮಾಡದೆ, ಅನುಮಾನಾಸ್ಪದ ನೋಟು ಸಿಕ್ಕರೆ ಅದರ ಭದ್ರತಾ ವೈಶಿಷ್ಟ್ಯಗಳನ್ನು ಪರಿಶೀಲಿಸುವುದು ಒಳಿತು.















