ಬಂಟಕಲ್ಲು ಕೆಸರುಗದ್ದೆ ಕ್ರೀಡೋತ್ಸವ ಉದ್ಘಾಟನೆ, ನಮ್ಮ ದೇಶದಲ್ಲಿ‌ ಕೃಷಿ ಸಂಸ್ಕೃತಿಯೇ ಪ್ರಧಾನ: ಗಣಪತಿ ನಾಯಕ್

ಉಡುಪಿ: ನಮ್ಮ ಪೂರ್ವಿಕರ ಶ್ರಮದಾಯಕ ಜೀವನದಲ್ಲಿ ಕೃಷಿ ಸಂಸ್ಕ್ರತಿಯೇ ಪ್ರಧಾನವಾಗಿದ್ದು, ಈ ತಳಹದಿಯಲ್ಲಿ ಧಾರ್ಮಿಕ ವೈದಿಕ ಪರಂಪರೆ ಬೆಳೆದು ಬಂದಿದೆ. ಅವಿಭಕ್ತ ಕುಟುಂಬದಲ್ಲಿ ಮಕ್ಕಳಿಗೆ ನೋಡಿಕಲಿಯುವ ಅವಕಾಶವಿತ್ತು. ಈಗಿನ ಮಕ್ಕಳಿಗೆ ಈ ಅವಕಾಶವಿಲ್ಲ. ನವಪೀಳಿಗೆಯಲ್ಲಿ ಕೃಷಿ ಪರಂಪರೆಯನ್ನು ಪರಿಚಯಿಸುವಲ್ಲಿ ಕೆಸರುಗದ್ದೆ ಕ್ರೀಡೋತ್ಸವಗಳು ಪ್ರೇರಕ ಎಂದು ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಲಿತ ಮೊಕ್ತೇಸರ ಗುರ್ನೆಬೆಟ್ಟು ಗಣಪತಿ ನಾಯಕ್ ಹೇಳಿದರು.
ಅವರು ಭಾನುವಾರ ಬಂಟಕಲ್ಲು ರಾಜಾಪುರ ಸಾರಸ್ವತ ಯುವವೃಂದ, ಶ್ರೀದುರ್ಗಾ ಮಹಿಳಾ ವೃಂದದ ಜಂಟಿ ಆಶ್ರಯದಲ್ಲಿ ಸಡಂಬೈಲು ಅನಂತರಾಮ ವಾಗ್ಲೆಯವರ ಗದ್ದೆಯಲ್ಲಿ ರವಿವಾರ ಏರ್ಪಡಿಸಿದ “ಕೆಸರುಗದ್ದೆ ಕ್ರೀಡೋತ್ಸವ” ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಿರ್ವ/ಬೆಳ್ಳೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್ ಮಾತನಾಡಿ, ಕೆಸರುಗದ್ದೆ ನಮ್ಮ ಸಮಾಜದ ಬಳುವಳಿಯಾಗಿದ್ದು, ಕೃಷಿಯೇ ಜೀವನಾಧಾರವಾಗಿ ಬೆಳೆದ ನಮ್ಮ ಸಮಾಜದ ಇಂದಿನ ಉನ್ನತಿಗೆ ಹಿರಿಯರ ಶ್ರಮವೇ ಮೂಲ ಕಾರಣವಾಗಿದೆ. ಉತ್ತಮ ಪರಿಸರವೇ ಆರೋಗ್ಯದ ಸಂಪತ್ತಾಗಿದ್ದು, ಸಾತ್ವಿಕ ಆಹಾರಪದ್ದತಿಯಿಂದ ಆರೋಗ್ಯವಂತ ಸಾತ್ವಿಕ ಸಮಾಜ ನಿರ್ಮಾಣವಾಗಿದೆ. ನಮ್ಮ ಸಮಾಜದ ಸಂಘಟನೆಗಳು ಇದ್ದ ಪ್ರತೀಯೊಂದು ಊರಿನಲ್ಲೂ ಇಂತಹ ಕಾರ್ಯಕ್ರಮ ನಡೆಯುವಂತಾಗಿ ಇಂದಿನ ಮಕ್ಕಳಿಗೆ ಕೃಷಿಪರಂಪರೆಯ ಪರಿಚಯ ಮಾಡಬೇಕು ಎಂದರು.
ಸೂಡ, ಪುನಾರು ಬೆಳ್ಮಣ್ ಒಕ್ಕೂಟದ ಆರ್‌ಎಸ್‌ಬಿ ಸಂಘದ ಅಧ್ಯಕ್ಷ ರಂಜಿತ್ ಕೆ.ಎಸ್.ಮಾತನಾಡಿ, ಕೃಷಿಕರಲ್ಲಿದ್ದ ಅನ್ಯೋನ್ಯತೆ, ಪ್ರೀತಿ ಸಹಕಾರ ಮನೋಭಾವ ಇಂದಿನ ವಿದ್ಯಾವಂತರಲ್ಲಿ ಇಲ್ಲ. ಹಿರಿಯರ ಕೃಷಿಭೂಮಿಯನ್ನು ಹಡಿಲು ಬಿಡುವುದು, ಮಾರುವುದು ಬಿಟ್ಟು ಉಳಿಸಿ ಬೆಳೆಸಬೇಕು‌ ಎಂದರು.
ಶಿರ್ವ ಕೆನರಾ ಬ್ಯಾಂಕ್ ಶಾಖಾಧಿಕಾರಿ ನಳಿನಾ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಯುವವೃಂದದ ಅಧ್ಯಕ್ಷ ವೀರೇಂದ್ರ ಪಾಟ್ಕರ್ ವಹಿಸಿ ಸ್ವಾಗತಿಸಿದರು. ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್ ಪ್ರಾಸ್ತಾವನೆಗೈದರು.
ಹಿರಿಯ ಪ್ರಗತಿಪರ ಕೃಷಿಕ ಶ್ರೀನಿವಾಸ ವಾಗ್ಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವದಾಸ್ ಪಾಟ್ಕರ್ ನಿರೂಪಿಸಿದರು. ಮಹಿಳಾ ವೃಂದದ ಅಧ್ಯಕ್ಷೆ ಅರುಂಧತಿ ಪ್ರಭು ವಂದಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಕಾರ್ಯದರ್ಶಿ ಗೌರವ್ ಜಿ.ಪ್ರಭು, ಬೆಳ್ಳೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಶಿಧರ ವಾಗ್ಲೆ, ಉಡುಪಿ ವಲಯ ಜೇಸಿ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಶ್ರೀ ದೇವಳದ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು, ಉಮೇಶ ಪ್ರಭು ಪಾಲಮೆ, ಉಪಸ್ಥಿತರಿದ್ದರು.