ಶಿರ್ವಾ: ಬ್ಲೇಡಿನಲ್ಲಿ ಕೈ ಕೊಯ್ದುಕೊಂಡು ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರ್ವಾದ ಬಂಟಕಲ್ಲು ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಬಂಟಕಲ್ಲು ಅರಸೀಕಟ್ಟೆ ನಿವಾಸಿ ಪ್ರೇಮಾ (38) ಎಂದು ಗುರುತಿಸಲಾಗಿದೆ. ಈಕೆ ಭಾನುವಾರ (ಅ. 25) ಬೆಳಿಗ್ಗೆ 11.30ಕ್ಕೆ ಮದ್ಯಸೇವಿಸಿ ಪತಿ ರಮೇಶ್ ಜತೆಗೆ ಮನೆಯಲ್ಲಿ ಜಗಳ ಮಾಡಿದ್ದಳು ಎನ್ನಲಾಗಿದೆ.
ರಾತ್ರಿ ಮತ್ತೆ ಗಂಡನ ಜೊತೆಗೆ ಗಲಾಟೆ ಮಾಡಿದ್ದಳು. ಈಕೆಯ ತಲೆಗೆ ಏರಿದ್ದ ಮದ್ಯದ ನಶೆ ಇನ್ನೂ ಇಳಿದಿರಲಿಲ್ಲ. ಹಾಗಾಗಿ ಗಂಡ ರಾತ್ರಿ 8.30 ಸುಮಾರಿಗೆ ಊಟ ಮಾಡಿ ಮಲಗುವಂತೆ ಪತ್ನಿಗೆ ಸೂಚಿಸಿದ್ದಾನೆ. ಇದರಿಂದ ಕೋಪಗೊಂಡ ಪ್ರೇಮಾ, ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಳು.
ಕೆಲ ಸಮಯದ ಬಳಿಕ ಗಂಡ ಬಾಗಿಲು ತೆರೆದು ನೋಡಿದಾಗ ಪ್ರೇಮಾ ತನ್ನ ಕೈಗೆ ಬ್ಲೇಡ್ ನಲ್ಲಿ ಕೊಯ್ದುಕೊಂಡಿದ್ದಳು. ಇದರಿಂದ ಆಕೆಗೆ ತೀವ್ರ ರಕ್ತಸ್ರಾವವಾಗಿದ್ದು, ಕೂಡಲೇ ಮನೆಯವರು ಉಡುಪಿ ಅಜ್ಜರಕಾಡಿನ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು ಪ್ರೇಮಾ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ. ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.