ಎಲ್.ಐ.ಸಿ. ಎಂಪ್ಲಾಯಿಸ್ ಕೋ-ಆಪರೇಟಿವ್ ಬ್ಯಾಂಕ್‌ಗೆ ‘ಬ್ಯಾಂಕೋ ಬ್ಲೂ ರಿಬ್ಬನ್’ ಪ್ರಶಸ್ತಿ

ಉಡುಪಿ: ಎಲ್.ಐ.ಸಿ. ಎಂಪ್ಲಾಯಿಸ್ ಕೋ-ಆಪರೇಟಿವ್ ಬ್ಯಾಂಕ್‌ಗೆ ಮಹಾರಾಷ್ಟ್ರದ ಅವಿಸ್ ಪಬ್ಲಿಕೇಶನ್ ನೀಡುವ ಪ್ರತಿಷ್ಠಿತ ‘ಬ್ಯಾಂಕೋ ಬ್ಲೂ ರಿಬ್ಬನ್ 2023 ’ ಪ್ರಶಸ್ತಿಯನ್ನು ಶುಕ್ರವಾರದಂದು ಪ್ರದಾನ ಮಾಡಲಾಯಿತು.

ದಾಮನ್‌ನಲ್ಲಿ ಆಯೋಜಿಸಲಾದ ವಾರ್ಷಿಕ ಶೃಂಗಸಭೆಯಲ್ಲಿ ಎಲ್.ಐ.ಸಿ ಎಂಪ್ಲಾಯಿಸ್ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಕೆ. ಕೃಷ್ಣ ಇವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಮುಖ್ಯ ಮಹಾ ಪ್ರಬಂಧಕ ಪಿ.ಕೆ ಅರೋರಾ ಇವರು ಪ್ರಶಸ್ತಿ ಪ್ರದಾನ ಮಾಡಿದರು.

ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಿಕೋ ಬ್ಯಾಂಕಿನ ನಿರ್ದೇಶಕ ಕೆ. ಶಿವಪ್ರಸಾದ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಕಲಾ ಹಾಗೂ ‘ಬ್ಯಾಂಕೋ’ ಅವಿಸ್ ಪಬ್ಲಿಕೇಶನ್‌ನ ಮುಖ್ಯ ಸಂಪಾದಕ ಅವಿನಾಶ್ ಶಿಂತ್ರೆ, ಗುಂಡೇಲ್, ಗ್ಯಾಲೆಕ್ಸಿ ಇನ್ಮಾ, ಪೂನೆ ಇದರ ನಿರ್ದೇಶಕ ಅಶೋಕ್ ನಾಯ್ಕ್ ಉಪಸ್ಥಿತರಿದ್ದರು.

ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸಹಕಾರ ಬ್ಯಾಂಕ್‌ಗಳ ಪ್ರತಿಕ್ರಿಯೆ ಮತ್ತು ಭಾಗವಹಿಸುವಿಕೆಯನ್ನು ಸ್ವೀಕರಿಸಿದ್ದು, ರಾಷ್ಟ್ರಮಟ್ಟದ ವೇತನದಾರರ ಸಹಕಾರ ಬ್ಯಾಂಕ್‌ಗಳ ವಿಭಾಗದಲ್ಲಿ ಅಸಾಧಾರಣ ಸಾಧನೆಗೈದ ಎಲ್.ಐ.ಸಿ ಎಂಪ್ಲಾಯಿಸ್ ಕೋ. ಆಪರೇಟಿವ್ ಬ್ಯಾಂಕ್‌ನ್ನು, ೨೦೨೩ರ ‘ಬ್ಯಾಂಕೋ ಬ್ಲೂ ರಿಬ್ಬನ್ ೨೦೨೩’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಲಿಕೋ ಬ್ಯಾಂಕ್ ತನ್ನ ಮುಡಿಗೇರಿಸಿಕೊಂಡಿದೆ.

ಸಹಕಾರಿ ರಂಗದಲ್ಲಿ ಹೊಸ ಅವಿಷ್ಕಾರದೊಂದಿಗೆ ಉತ್ತಮ ಬ್ಯಾಂಕಿಂಗ್ ಸೇವೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಾ ಬಂದಿದ್ದು, ಹಾಗೂ ಜನರ ಪ್ರಥಮ ಆದ್ಯತೆಯ ಬ್ಯಾಂಕ್ ಆಗಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು ಉಡುಪಿಗೆ ಹೆಮ್ಮೆ ತಂದಿದೆ.