ಬೆಂಗಳೂರು: ಯುವತಿ ರಸ್ತೆ ದಾಟುತ್ತಿದ್ದ ವೇಳೆ ಅತೀ ವೇಗವಾಗಿ ಬಂದ ಬುಲೆಟ್ ಬೈಕ್ ಸವಾರನೊಬ್ಬ ಯುವತಿಗೆ ಡಿಕ್ಕಿ ಹೊಡೆದಿದ್ದ ಪರಿಣಾಮ ಯುವತಿಯು ಮೃತಪಟ್ಟಿದ್ದಾರೆ. ಘಟನೆಯು ರಾಜ್‌ಕುಮಾರ್ ರಸ್ತೆಯ ಹೆಚ್‌ಡಿಎಫ್‌ಸಿ ಬ್ಯಾಂಕ್ ಬಳಿ ಫೆ.16 ರಂದು ನಡೆದಿದೆ.
ಮೃತಪಟ್ಟ ಯುವತಿಯನ್ನು ಲಗ್ಗೆರೆ ಬಳಿಯ ಕೆಂಪೇಗೌಡ ಲೇಔಟ್ ನಿವಾಸಿ 27 ವರ್ಷದ ಯೋಗೇಶ್ವರಿ ಎಂದು ಗುರುತಿಸಿದೆ.
ಯೋಗೇಶ್ವರಿ, ನಿನ್ನೆ ಮಧ್ಯಾಹ್ನ ತಮ್ಮ ಕೆಲಸದ ಸ್ಥಳದ ಸಮೀಪ ಊಟಕ್ಕೆಂದು ರಸ್ತೆ ದಾಟುತ್ತಿದ್ದರು. ಈ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ಬೈಕ್ ಸವಾರ ಯೋಗೇಶ್ವರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದ ಯೋಗೇಶ್ವರಿ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸುಗುಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ರಾಜಾಜಿನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬೈಕ್ ಸವಾರನ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.
















