ಪರ್ಯಾಯ ಪುತ್ತಿಗೆ ಮಠದ ಬಾಳೆ ಮುಹೂರ್ತ ಕಾರ್ಯಕ್ರಮ ಸಂಪನ್ನ

ಉಡುಪಿ: ಭಾವಿ ಪರ್ಯಾಯ ಪುತ್ತಿಗೆ ಮಠದ ಪರ್ಯಾಯ ಪೂರ್ವ ಮುಹೂರ್ತಗಳಲ್ಲಿ ಮೊದಲನೆಯ ಕಾರ್ಯಕ್ರಮ ಬಾಳೆ ಮುಹೂರ್ತ ಶುಕ್ರವಾರ ಬೆಳಿಗ್ಗೆ 8.20ರ ಧನುರ್ನಗ್ನದಲ್ಲಿ ನಡೆಯಿತು. 2024ರ ಜ. 18ರಂದು ಸರ್ವಜ್ಞ ಪೀಠವೇರಿ ಚತುರ್ಥ ಬಾರಿಗೆ ದ್ವೈವಾರ್ಷಿಕ ಶ್ರೀಕೃಷ್ಣ ಪೂಜಾ ಕೈಂಕರ್ಯ ಸ್ವೀಕರಿಸಲಿರುವ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪುತ್ತಿಗೆ ಮಠದ ನಿಗದಿತ ಸ್ಥಳದಲ್ಲಿ ಬಾಳೆ ಮತ್ತು ತುಳಸಿ ಸಸಿಗಳನ್ನು ನೆಡುವ ಮೂಲಕ ಸಾಂಪ್ರದಾಯಿಕ ಬಾಳೆ ಮುಹೂರ್ತಕ್ಕೆ ಚಾಲನೆ ನೀಡಲಾಯಿತು.

ಹೆರ್ಗ ವೇದವ್ಯಾಸ ಭಟ್, ಕೇಂಜ ಶ್ರೀಧರ ತಂತ್ರಿ ಮತ್ತು ರಾಘವೇಂದ್ರ ಕೊಡಂಚ ಧಾರ್ಮಿಕ ವಿಧಿ ವಿಧಾನ ನಡೆಸಿದರು.

ಶ್ರೀಮಠದ ಮೇಸ್ತ್ರಿ ಪದ್ಮನಾಭ ಸಹಕರಿಸಿದರು. ಇದಕ್ಕೂ ಮುನ್ನ ಬೆಳಗ್ಗೆ 7 ಗಂಟೆಗೆ ಪುತ್ತಿಗೆ ಮಠೀಯ ಉಪಾಸ್ಯದೇವರಾದ ಶ್ರೀ ವೀರವಿಠಲ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಸಲಾಯಿತು. ಬಳಿಕ ಬಾಳೆ ಮತ್ತು ಕಬ್ಬಿನ ಕಂದುಗಳು ಹಾಗೂ ತುಳಸಿ ಗಿಡಗಳ ಸಹಿತ ಪುತ್ತಿಗೆ ಮಠದಿಂದ ಮೆರವಣಿಗೆಯಲ್ಲಿ ಚಂದ್ರೇಶ್ವರ, ಅನಂತೇಶ್ವರ ದೇವರ ಸನ್ನಿಧಿಗೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.

ಬಳಿಕ ಕನಕನ ಕಿಂಡಿ ಮೂಲಕ ಕೃಷ್ಣ ದರ್ಶನದ ಬಳಿಕ ಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣ ಮುಖ್ಯಪ್ರಾಣ ಸನ್ನಿಧಿಯಲ್ಲಿ ಪ್ರಾರ್ಥಿಸಿ ಸುಬ್ರಹ್ಮಣ್ಯ, ನವಗ್ರಹ, ವೃಂದಾವನ ಸಮುಚ್ಛಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ತರುವಾಯ ಮತ್ತೆ ಮೆರವಣಿಗೆ ಮೂಲಕ ಪುತ್ತಿಗೆ ಮಠಕ್ಕೆ ಬರಲಾಯಿತು.

ಶ್ರೀಮಠದ ಪ್ರಸನ್ನಾಚಾರ್ಯ, ನಾಗರಾಜ ಆಚಾರ್ಯ, ರತೀಶ ತಂತ್ರಿ, ಕಟೀಲು ದೇವಳದ ಲಕ್ಷ್ಮೀನಾರಾಯಣ ಆಸ್ರಣ್ಣ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ದ.ಕ. ಕಸಾಪ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ಕೆ. ಶ್ರೀಪತಿ ಭಟ್ ಮೂಡುಬಿದಿರೆ, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪೇಜಾವರ ಮಠ ದಿವಾನ ರಘುರಾಮ ಆಚಾರ್ಯ, ಮಹಿಳಾ ಆಯೋಗ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ಕೊಲ್ಲೂರು ದೇವಳ ಟ್ರಸ್ಟಿ ಸಂಧ್ಯಾ, ವಿಜಯ ರಾಘವ ರಾವ್, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸುಧಾಕರ ಭಟ್, ತಾಲೂಕು ಅಧ್ಯಕ್ಷ ಮಂಜುನಾಥ ಉಪಾಧ್ಯ, ಅಂಡಾರು ದೇವಿಪ್ರಸಾದ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಸಂತ ಸಾಲ್ಯಾನ್, ಶಿವರಾಯ ಪ್ರಭು ಮತ್ತು ರಾಮ ಮೊದಲಾದವರಿದ್ದರು.

ಭಗವದ್ಗೀತೆಯ ಮೂಲಕ ಜಾಗೃತಿ ಕಾರ್ಯ

ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಧರ್ಮಗ್ರಂಥಗಳ ಮೂಲಕ ಸಮಾಜದಲ್ಲಿ ಜಾಗೃತಿ ಮತ್ತು ಸಂಘಟನೆ ಮಾಡುವ ಆಶಯದೊಂದಿಗೆ ಗೀತಾ ಪ್ರಚಾರ ಕಾರ್ಯದಲ್ಲಿ ತೊಡಗಿರುವುದಾಗಿ ಹೇಳಿದರು. ನಮ್ಮೆಲ್ಲಾ ಸಮಸ್ಯೆ, ಸಂದೇಹಗಳಿಗೆ ಗೀತೆಯಲ್ಲಿ ಉತ್ತರ ಇದೆ. ಗೀತಾ ಪಠಣದಿಂದ ಉದ್ವೇಗ ನಿವಾರಣೆಯಾಗುತ್ತದೆ. ಭಾರತದ ಭಗವದ್ಗೀತೆಯನ್ನು ಕೋಟಿ ಲೇಖನದ ಮೂಲಕ ವಿಶ್ವವ್ಯಾಪಿಯಾಗಿಸುವ ಸಂಕಲ್ಪ ತೊಡಲಾಗಿದೆ ಎಂದರು.

ಲೋಕ ಕಲ್ಯಾಣದ ಆಶಯದಿಂದ ಆಚಾರ್ಯ ಮಧ್ವರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ, ಅಷ್ಟ ಯತಿಗಳನ್ನು ನಿಯೋಜಿಸಿದರು. ಬಾಲ ರೂಪಿ ಶ್ರೀಕೃಷ್ಣನನ್ನು ಪೂಜಿಸುವುದರಿಂದ ನಮ್ಮೆಲ್ಲಾ ಕಾಮನೆಗಳು ಪೂರ್ಣಗೊಳ್ಳುತ್ತದೆ. ನಾವು ಯಾವ ಭಾವದಿಂದ ಭಗವಂತನನ್ನು ಆರಾಧಿಸುತ್ತೇವೆಯೋ ಅದಕ್ಕೆ ಸರಿಯಾಗಿ ಫಲ ಲಭಿಸುತ್ತದೆ ಎಂದರು.

ಸಂಪಾದಕ ಮಹಿತೋಷ ಆಚಾರ್ಯ ಸ್ವಾಗತಿಸಿ, ವಾದಿರಾಜ ಸಂಶೋಧನ ಕೇಂದ್ರ ನಿರ್ದೇಶಕ ಗೋಪಾಲಾಚಾರ್ ನಿರೂಪಿಸಿದರು.

ಈ ಸಂದರ್ಭದಲ್ಲಿ ಕೆ. ವಿ. ರಮಣ್ ಮತ್ತು ಅಯನಾ ಸಿದ್ಧಪಡಿಸಿದ ಗೀತಾ ಪ್ರಚಾರದ ಮೊಬೈಲ್ ಸ್ವರಗೀತೆ (ಹ್ಯಾಲೋ ಟೋನ್)ಯನ್ನು ಶ್ರೀಗಳು ಬಿಡುಗಡೆಗೊಳಿಸಿದರು.

ನೆರೆದ ಸಾರ್ವಜನಿಕ ಭಕ್ತಾದಿಗಳಿಗೆ ಬಾಳೆ ಸಸಿ ವಿತರಿಸಲಾಯಿತು.