ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಮುಗಿಸಿ: ಜಯಮಾಲ

ಉಡುಪಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಾಕಿ ಇರುವ ಎಲ್ಲಾ ಟೆಂಡರ್, ವರ್ಕ್ ಆರ್ಡರ್ ಹಾಗೂ ಇತರ ಎಲ್ಲಾ ಕೆಲಸಗಳನ್ನು ಶೀಘ್ರವಾಗಿ ಪೂರೈಸಿಕೊಳ್ಳುವಂತೆ ಆಯಾ ಇಲಾಖೆ ಮುಖ್ಯಸ್ಥರು ಹಾಗೂ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಸೂಚಿಸಿದ್ದಾರೆ.
ಅವರು ಬುಧವಾರ ರಜತಾದ್ರಿಯ ಜಿ.ಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಉಂಟಾಗಿರುವ ಮರಳು ಸಮಸ್ಯೆ ಬಗ್ಗೆ ಚರ್ಚೆ ನಡೆದಿದ್ದು, ಜಿಲ್ಲೆಯಲ್ಲಿ ಮರಳು ದೊರಕುವ ಜಾಗ ಹಾಗೂ ಸಾರ್ವಜನಿಕರು ಮರಳು ಸಿಗಬೇಕಾದರೆ ಯಾರನ್ನು ಸಂಪರ್ಕಿಸಬೇಕು,  ತಾಲೂಕು ಯಾರ್ಡ್ ಸ್ಟಾಕ್ ದರಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು.
ರಸ್ತೆ ವಿಸ್ತರಣೆಗೆ ಮರಗಳ ತೆರವುಗೊಳಿಸುವ ವಿಚಾರಕ್ಕೆ ಸಂಬಂಧಿಸಿ, ಬದಲಿ ಸ್ಥಳಗಳಲ್ಲಿ ಎಷ್ಟು ಗಿಡಗಳನ್ನು ನೆಡಲಾಗಿದೆ. ಆ ಗಿಡಗಳು ಎಷ್ಟು ಬೆಳೆದಿದೆ ಹಾಗೂ ಅವುಗಳ ನಿರ್ವಹಣೆ ಕುರಿತು ಸಂಪೂರ್ಣ ವರದಿ ನೀಡುವಂತೆ ಅರಣ್ಯ ಇಲಾಖೆಗೆ ಮತ್ತು    ರಾಷ್ಟ್ರೀಯ ಹೆದ್ದಾರಿಯ ಕಾಮಗಾಗಿ ವಿಳಂವಾಗಿರುವ ಬಗ್ಗೆ ಪ್ರತಿಕ್ರಿಯಿಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು, ಹೆದ್ದಾರಿಯ 11 ಕಡೆಗಳಲ್ಲಿ ಹೊಸದಾಗಿ ಸರ್ವೀಸ್ ರಸ್ತೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದ್ದು, ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು.
ಹಿಂದುಳಿದ ವರ್ಗಗಳ ಅಭಿವೃದ್ಧಿ, ನಿಗಮ ಅಲ್ಪ ಸಂಖ್ಯಾತರ ಅಭಿವೃದ್ಧಿ, ನಿಗಮ ಪರಿಶಿಷ್ಟ ತಾತಿ / ಪಂಗಡಗಳ ಅಭಿವೃದ್ಧಿ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ವಿಳಂಬವಾಗಿರುವ ತೆರೆದ ಬಾವಿ ನಿರ್ಮಾಣ, ಪಂಪ್ ಸೆಟ್ ವಿತರಣೆ, ವಿದ್ಯುತೀಕರಣ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ  ತಿಳಿಸಿದ ಸಚಿವರು, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಂದ್ರ ಸರಕಾರದಿಂದ ಅನುದಾನ ಬರಲು ಬಾಕಿ ಇದ್ದು ಸಂದಾಯ ಮಾಡಲು ವಿಳಂಬವಾಗಿದೆ ಈ ಬಗ್ಗೆ ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದ್ದು ಈ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶೇಷ ಗಮನ ಹರಿಸಿದೆ ಎಂದು ತಿಳಿಸಿದರು.
        ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆಯ ಸಮಯದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಕೈಕೊಳ್ಳುವ ಕ್ರಮದ ಕುರಿತಂತೆ,  ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದ ರೀತಿಯಲ್ಲಿ ಕ್ರಮವಹಿಸಲು ಮತ್ತು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಗಳ ಹಾಗೂ  ತಾಲೂಕು ಟಾಸ್ಕ್ ಪೋರ್ಸ್ ಸಮಿತಿಗಳ ಸಭೆ ಕರೆದು ಮುಂಚಿತವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಿದರು.
     ಸಣ್ಣ ನೀರಾವರಿ ಯೋಜನೆಯಲ್ಲಿ ಜಿಲ್ಲೆಯಲ್ಲಿ 19 ಕಿಂಡಿ ಅಣೆಕಟ್ಟು ಪೂರ್ಣ ಆಗಿದೆ. 8 ಕಿಂಡಿ ಅಣೆಕಟ್ಟು ಪ್ರಗತಿಯಲ್ಲಿದೆ. ಕಿಂಡಿ ಅಣೆ ಕಟ್ಟುಗಳಿಗೆ ಹಲಗೆ ಬಳಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಡು ಹೊಳೆಯಲ್ಲಿ ಕಿಂಡಿ ಅಣೆಕಟ್ಟಿಗೆ ಅಳವಡಿಸುರುವ ಫೈಬರ್ ಸಿಸ್ಟಮ್‍ನಿಂದ ನೀರು ಸೋರಿಕೆಯಾಗುವ ಕುರಿತು ಚರ್ಚಿಸಿದ್ದು ನೀರು ಸೋರಿಕೆಯಾಗುತ್ತಿರುವ ಕಡೆಗಳಲ್ಲಿ ಕೂಡಲೇ ಸೋರಿಕೆ ತಡೆಗಟ್ಟಲು ದುರಸ್ತಿ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸೀಸ್ ಯಂತ್ರಗಳು ಕಾರ್ಯನಿರ್ವಹಿಸದಿರುವ ಬಗ್ಗೆ ಚರ್ಚೆ ನಡೆದಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯಂತ್ರ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು. ಕುಂದಾಪುರ ತಾಲೂಕಿನಲ್ಲಿ ಡಯಾಲಿಸಿಸ್ ಕೊಠಡಿಗೆ ಜನರೇಟರ್ ಹಾಗೂ ಹೆಚ್ಚುವರಿ ಡಯಾಲಿಸಿಸ್ ಯಂತ್ರ ಜೋಡಿಸುವ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೂಡಲೇ ಅಗತ್ಯ ಕ್ರಮ ಕೈಗೊಂಡು ವರದಿ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗೆ ಸಚಿವರು ಸೂಚಿಸಿದರು.
       ಹಿಂದುಳಿದ ವರ್ಗಗಳ ವಸತಿ ನಿಲಯ ನಿರ್ಮಾಣದ ಬಗ್ಗೆ ಚರ್ಚೆ ನಡೆದಿದ್ದು,. ಉಡುಪಿ ಜಿಲ್ಲೆಯಲ್ಲಿ ಉತ್ತಮ ಶಿಕ್ಷಣ ಇರುವುದರಿಂದ ಎರಡು ಹೆಚ್ಚುವರಿ ಹಿಂದುಳಿದ ವರ್ಗ ಹಾಸ್ಟೆಲ್ ಮಂಜೂರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಕೂಡಲೇ ಅವುಗಳನ್ನು ಸರ್ಕಾರದಿಂದ ಮಂಜೂರಿ ಮಾಡಿಸಲಾಗುವುದು. ಹಾಸ್ಟೆಲ್‍ಗಳ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇದ್ದರೆ ಲಭ್ಯವಿರುವ ಜಾಗವನ್ನು ಗುರುತಿಸಿ ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.
ಐ.ಟಿ.ಡಿ.ಪಿ. ಯೋಜನೆಯಲ್ಲಿ ಪರಿಶಿಷ್ಟ ವರ್ಗದವರಿಗೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಹಾಗೂ ಈ ಯೋಜನೆಗಳ ಬಗ್ಗೆ ವಿಶೇಷ ಗಮನ ಹರಿಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ತಿಳಿಸಿದರು.
ಕಾರ್ಕಳ ತಾಲೂಕು ಬೆಳ್ಮಣ್ಣುವಿನ ಜಂತ್ರಾದಲ್ಲಿ ನೆಲಸಮಗೊಳಿಸಿರುವ  5 ಮನೆಗಳ ಕುಟುಂಬದವರಿಗೆ ಬದಲಿ ನಿವೇಶನ  ನೀಡಿ, ವಸತಿ ಯೋಜನೆಯಡಿ ಮನೆ ಮಂಜೂರುಬ ಮಾಡುವಂತೆ ಜಿಲ್ಲಾಧಿಕಾರಿಗೆ ಸಚಿವರು ತಿಳಿಸಿದರು.
 ಸರಕಾರಿ ಕೆಲಸಗಳಿಗೆ ಸರಕಾರದ ಅನುಮತಿ ಪಡೆದು ಡೀಮ್ಡ್ ಫಾರೆಸ್ಟ್ ಜಾಗವನ್ನು ನೀಡಬಹುದು ಎಂದು ಸುತ್ತೋಲೆ ಇರುವುದಾಗಿ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ  ಪೂಜಾರಿ ತಿಳಿಸಿದರು.
     ಕಾರ್ಕಳ ಥೀಂ ಪಾರ್ಕ್ ನಿರ್ಮಾಣಕ್ಕೆ 10 ಎಕರೆ ಜಾಗವನ್ನು ಈಗಾಗಲೇ ಮಂಜೂರು ಮಾಡಲಾಗಿದ್ದು ಹೆಚ್ಚುವರಿ 50 ಎಕರೆ ಮಂಜೂರು ಮಾಡಿ,  ಥೀಂ ಪಾರ್ಕ್ ನಲ್ಲಿ ಕೋಟಿ ಚೆನ್ನಯ್ಯರು ಬೆಳೆದು ಬಂದ ಜೀವನ ಚರಿತ್ರೆ ವಿವರಿಸುವ ಮಾಹಿತಿ ಇಡುವ ವ್ಯವಸ್ಥೆ ಆಗಬೇಕು. ಪ್ರವಾಸಿಗರಿಗೆ ಪಾರ್ಕಿಂಗ್, ಫುಡ್ ಕೋರ್ಟ್, ಚಿಲ್ರ್ಡನ್ ಬುಕ್ ಪಾರ್ಕ್, ಹಾಗೂ ಟಾಯ್ ಟ್ರೈನ್ ಹಾಗೂ  ಸೌಂಡ್ & ಲೈಟ್ ವ್ಯವಸ್ಥೆ ನಿರ್ಮಾಣದ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ತೋಟಗಾರಿಕಾ ಇಲಾಖೆಯಿಂದ ಅಡಿಕೆ ಕೊಳೆರೋಗದ ಸಮಸ್ಯೆಗೆ ಒಳಗಾಗಿದ್ದ ಬೆಳೆಗಾರರಿಗೆ ನೀಡುರುವ ಪರಿಹಾರದ ಕುರಿತು ಚರ್ಚೆ ನಡೆದು, ಜಿಲ್ಲೆಯಲ್ಲಿ 6253 ಅಡಿಕೆ ಬೆಳೆಗಾರರಿಗೆ  8.7 ಕೋಟಿ ಕೋಳೆರೋಗ ಪರಿಹಾರ ನೀಡಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ 28 ಹೆಚ್ಚುವರಿ ಅಂಗನವಾಡಿ ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಜನಸಂಖ್ಯೆ ಹಾಗೂ ಅವಶ್ಯಕ್ತೆಯ ಆಧಾರದ ಮೇಲೆ ಅಂಗನವಾಡಿ ನಿರ್ಮಾಣಕ್ಕೆ ಆಧ್ಯತೆ ನೀಡಲಾಗುತ್ತದೆ  ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ಸಿಂಧೂ ಬಿ. ರೂಪೇಶ್, ಎಸ್.ಪಿ ನಿಶಾ ಜೇಮ್ಸ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.