ಬೆಂಗಳೂರು: ಬಿಜೆಪಿ-ಕಾಂಗ್ರೆಸ್ ಮಧ್ಯೆ ಚುನಾವಣಾ ಕದನ ತಾರಕ್ಕೇರಿದ್ದು, ಮಂಗಳವಾರದಂದು ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ತನ್ನ ಪ್ರಣಾಳಿಕೆಯಲ್ಲಿ ಪಿ.ಎಫ್.ಐ ಮತ್ತು ಬಜರಂಗದಳವನ್ನು ಸಮೀಕರಿಸಿದ್ದ ಕಾಂಗ್ರೆಸ್ ಈ ಸಂಘಟನೆಗಳಿಗೆ ನಿಷೇಧ ಹೇರುವ ಬಗ್ಗೆ ಘೋಷಣೆ ಮಾಡಿತ್ತು. ಇದರಿಂದ ಆಕ್ರೋಶಗೊಂಡ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದಂತಹ ಹಿಂದೂ ಪರ ಸಂಘಟನೆಗಳು ಕಾಂಗ್ರೆಸ್ ವಿರುದ್ದ ಕಿಡಿಕಾರಿವೆ.
ಕಾಂಗ್ರೆಸ್ ನ ಬಜರಂಗದಳ ನಿಷೇಧ ಭರವಸೆಗೆ ಇತ್ತ ಬಿಜೆಪಿ ನಾಯಕರು ಕೂಡಾ ಸಿಡಿದೆದ್ದಿದ್ದಾರೆ. ತಮ್ಮ ಪ್ರೊಫೈಲ್ ಫೋಟೋ, ವಾಟ್ಸಪ್, ಫೇಸ್‌ಬುಕ್ ಸ್ಟೇಟಸ್‌ಗಳಲ್ಲಿ ನಾನೊಬ್ಬ ಭಜರಂಗಿ ಅಂತಾ ಘೋಷಣೆ ಮಾಡ್ಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಭರವಸೆ ವಿರುದ್ಧ ಬಿಜೆಪಿ ಡಿಜಿಟಲ್ ಅಭಿಯಾನ ಕೈಗೊಂಡಿದ್ದು, ರಾಜ್ಯಾದ್ಯಂತ ʻಜೈ ಭಜರಂಗಿ ಕ್ಯಾಂಪೇನ್ʼ ಅನ್ನು ತೀವ್ರಗೊಳಿಸಲಾಗಿದೆ. ‘ನಾನೊಬ್ಬ ಕನ್ನಡಿಗ, ನನ್ನ ನಾಡು ನಾನು ಹನುಮ ಜನಿಸಿದ ನಾಡು, ನಾನೊಬ್ಬ ಬಜರಂಗಿ’ ಎಂದು ಪ್ರೊಫೈಲ್ ಫೋಟೋ ಹಾಕುತ್ತಿದ್ದಾರೆ.
ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳಗಳು ಇದಕ್ಕೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ತಕ್ಕನಾದ ಉತ್ತರ ನೀಡುವುದಾಗಿ ಬಹಿರಂಗ ಘೋಷಣೆ ಮಾಡಿವೆ. ಪ್ರಧಾನಿ ಮೋದಿ ಸಹಿತ ಕೇಂದ್ರ ಮತ್ತು ರಾಜ್ಯ ಬಿಜೆಪಿಯ ಘಟಾನುಘಟಿ ನಾಯಕರು ಕಾಂಗ್ರೆಸ್ ನ ಈ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಚುನಾವಣೆಗೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಇದುವರೆಗೆ ಬಿಸಿಯ ಬೇಗೆಯಿಂದ ಬಳಲುತ್ತಿದ್ದ ರಾಜ್ಯಕ್ಕೆ ಈ ಪ್ರಕರಣವು ಮತ್ತಷ್ಟು ಬಿಸಿಯೇರುವಂತೆ ಮಾಡಿದೆ. ಈ ಎಲ್ಲದರ ಮಧ್ಯೆ ಮತದಾರ ಮಾತ್ರ ಮುಗುಮ್ಮಾಗಿ ಉಳಿದಿದ್ದು, ಮೇ 10 ರಂದು ತನ್ನ ತೀರ್ಮಾನವನ್ನು ತೆಗೆದುಕೊಳ್ಳಲಿದ್ದಾನೆ.