ಬಜೆ ಜಲಾಶಯದಲ್ಲಿ ನೀರಿದ್ದರೂ ಕೃಷಿಗೆ ನೀರು ಕೊಡುತ್ತಿಲ್ಲ: ಕುದಿ ಶ್ರೀನಿವಾಸ ಭಟ್‌

ಉಡುಪಿ: ಕಳೆದ 22 ದಿನಗಳಿಂದ ರೈತರ ಬೆಳೆಗಳಿಗೆ ನೀರಿಲ್ಲ. ಜಿಲ್ಲಾಡಳಿತಕ್ಕೆ ಮನವಿ
ಮಾಡಿದರೂ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಬಿಸಿಲಿನ ತಾಪಕ್ಕೆ ರೈತರ ಬೆಳೆ ಒಣಗಿ, ಅವರ ಬದುಕೇ ನಾಶವಾಗುತ್ತಿದೆ. ಬಜೆ ಅಣೆಕಟ್ಟಿನಲ್ಲಿ ಸಾಕಷ್ಟು ನೀರಿದ್ದರೂ ಕೃಷಿಗೆ ನೀರು ಕೊಡುತ್ತಿಲ್ಲ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್‌ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯಡಕ ನದಿಪಾತ್ರದ ರೈತರ ವಿದ್ಯುತ್‌ ಪಂಪ್‌ ಸೆಟ್‌ಗಳನ್ನು ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಹಾಗೂ ವಾರದಲ್ಲಿ ಎರಡು ದಿನ ಕೃಷಿ ಭೂಮಿಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ಕೃಷಿಕ ಸಂಘದ ನೇತೃತ್ವದಲ್ಲಿ ಶುಕ್ರವಾರ ಹಿರಿಯಡಕ ಸಮೀಪದ ಬಜೆ ಜಲಾಶಯದ ಬಳಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು.
ಈ ಹಿಂದೆ ಮಾರ್ಚ್‌–ಏಪ್ರಿಲ್‌ನಲ್ಲಿ ವಾರದಲ್ಲಿ ಎರಡು ದಿನ ಹಾಗೂ ಮೇಯಲ್ಲಿ ವಾರದಲ್ಲಿ ಒಂದು ದಿನ ನೀರೆತ್ತಲು ಅವಕಾಶ ಇತ್ತು. ಈಗ ಫೆಬ್ರವರಿ ತಿಂಗಳಲ್ಲಿಯೇ ಏಕಾಏಕಿಯಾಗಿ ರೈತರ ನೀರಿನ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಕುಡಿಯುವ ನೀರನ್ನು ಕಟ್ಟಡ ನಿರ್ಮಾಣ ಕಾಮಗಾರಿ, ಅಲಂಕಾರಿಕ ಹೂದೋಟ, ಐಶಾರಾಮಿ ಜನರು ಅನಗತ್ಯ ಪೋಲು ಮಾಡುತ್ತಿದ್ದಾರೆ. ಇದರ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು.
2007ರಲ್ಲಿ 9,325 ನಳ್ಳಿ ನೀರು ಸಂಪರ್ಕ, 1600 ವಾಣಿಜ್ಯ ಸಂಪರ್ಕಗಳಿದ್ದವು. ಪ್ರಸ್ತುತ ಅದು 30 ಸಾವಿರಗಳಿಗೆ ದಾಟಿದೆ. ಆದರೆ ಜಲಾಶಯ ಹಾಗೂ ನೀರಿನ ಸಂಗ್ರಹದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಾಗಾಗಿ ಬೇಸಿಗೆಯಲ್ಲಿ ನೀರಿನ ಕೊರತೆ ಆಗುವುದು ಸಹಜ. ಮಣಿಪಾಲ ಪ್ರದೇಶಕ್ಕೆ ಹಾಯಿಸುತ್ತಿರುವ 150 ಎಚ್‌ಪಿ ಮೋಟಾರ್‌ ಸಾಮರ್ಥ್ಯದ ನೀರು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಹಾಗಾಗಿ ಇದನ್ನು ತಕ್ಷಣ ನಿಲ್ಲಿಸಬೇಕು
ಎಂದು ಅವರು ಒತ್ತಾಯಿಸಿದರು.
ನೀರಿನ ಹಕ್ಕಿಗಾಗಿ ಹಿಂಸೆಗಿಳಿಯಾಲು ಸಿದ್ಧ:
ನೀರಿನ ಮಟ್ಟ, ಲಭ್ಯತೆಗೆ ಅನುಸಾರವಾಗಿ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ವಾರಕ್ಕೆ ಎರಡು ಬಾರಿ ಹಾಗೂ ಮೇ ತಿಂಗಳಲ್ಲಿ ವಾರಕ್ಕೆ ಒಂದು ಬಾರಿ ರೈತರ ಕೃಷಿ ಭೂಮಿಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ನಾವು ಸುಮ್ಮನೆ ಕೂರಲ್ಲ. ಹಿಂಸಾತ್ಮಕ ಪ್ರತಿಭಟನೆ ನಡೆಸಲು ಹಿಂಜರಿಯಲ್ಲ. ಇದಕ್ಕೆಲ್ಲ ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ ಎಂದು ಉಡುಪಿ ಜಿಲ್ಲಾ ಕೃಷಿ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಎಚ್ಚರಿಕೆ
ನೀಡಿದರು.
ರೈತರ ತಾಳ್ಮೆ ಪರೀಕ್ಷೆ ಮಾಡಬೇಡಿ. ಇಂದು ಸಂಜೆಯೊಳಗೆ ರೈತರ ಪಂಪ್‌ ಸೆಟ್‌ಗಳಿಗೆ
ವಿದ್ಯುತ್‌ ನೀಡಿ. ಇಲ್ಲದಿದ್ದರೆ ನಾವು ಇನ್ಮುಂದೆ ಜಿಲ್ಲಾಡಳಿತದ ಯಾವುದೇ ಆದೇಶ ಪಾಲಿಸುವುದಿಲ್ಲ. ಯಾವುದೇ ಕಾನೂನಿಗೂ ಜಗ್ಗಲ್ಲ. ಡಿಸೇಲ್‌ ಬಳಸಿಕೊಂಡು ನದಿಯಿಂದ
ನೀರೆತ್ತಿ, ನಮ್ಮ ಕೃಷಿ ಭೂಮಿಗಳನ್ನು ಉಳಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು, ಉದಯ ಭಟ್‌, ವೇದವ್ಯಾಸ
ಆಚಾರ್ಯ, ಭಾರತಿ ಶೆಟ್ಟಿ ಅಂಜಾರು, ಅಶೋಕ್‌ ಶೆಟ್ಟಿ ಹಿರಿಯಡಕ, ಶ್ರೀನಿವಾಸ ಪೂಜಾರಿ ಅಂಜಾರು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.