ಕುಂದಾಪುರ: ಕನ್ನಡ ನಾಡು ಭಾಷೆ, ಕಲೆ, ಸಂಸ್ಕೃತಿ, ಶಿಲ್ಪ ಕಲೆಗಳ ಬೀಡು. ಕನ್ನಡ ನೆಲದ ವೈವಿಧ್ಯತೆಯನ್ನು ಕನ್ನಡದ ಭಾಷೆಯ (Language) ವಿವಿಧ ಪ್ರಕಾರಗಳ ಮೂಲಕವೂ ನೋಡಬಹುದು. ಉತ್ತರ ಕನ್ನಡ ಭಾಗದಲ್ಲಿ ಒಂದು ರೀತಿಯ ಕನ್ನಡ ಮಾತಾಡೋರು ಇದ್ರೆ, ದಕ್ಷಿಣ ಕನ್ನಡದಲ್ಲಿ ಇನ್ನೊಂದು ರೀತಿಯ ಕನ್ನಡ (Kannada) ಮಾತಾಡೋರನ್ನು ಕಾಣಬಹುದು. ಕಡಲತೀರ ಕುಂದಾಪುರದಲ್ಲಿ (Kundapra) ಕುಂದ ಕನ್ನಡದ (Kunda Kannada) ಸೊಬಗನ್ನು ಕಾಣಬಹುದು. ಹೀಗೆ ಬೇರೆ ಬೇರೆ ಭೌಗೋಳಿಕ ಪ್ರದೇಶದಲ್ಲಿ ಬೇರೆ ಬೇರೆ ಕನ್ನಡ ಮಾತಾನಾಡುವ ಜನರಿದ್ದಾರೆ. ಆಯಾ ಪ್ರದೇಶಕ್ಕನುಗುಣವಾಗಿ ಆ ಭಾಷೆ ಹೆಸರನ್ನು ಪಡೆದಿದೆ. ಆಟಿ ಅಮಾಸೆಯಂದು ವಿಶ್ವ ಕುಂದಾಪ್ರ ಕನ್ನಡ (Vishwa Kundapura Kannada) ದಿನವನ್ನು ಆಚರಿಸುತ್ತಾರೆ ಭಾಷೆಯ ಮೇಲಿನ ವಿಶೇಷ ಅಭಿಮಾನದಿಂದ ಜಗತ್ತಿನ ವಿವಿಧೆಡೆ ವಿಶ್ವ ಕುಂದಾಪ್ರ ದಿನವನ್ನು ಆಚರಿಸುತ್ತಾರೆ.
ಭಾಷಿ ಅಲ್ಲ ಬದ್ಕ್ ಈ ಕುಂದ ಕನ್ನಡ
ಕುಂದಾಪ್ರ ಕನ್ನಡ ಭಾಷೆ ಮಾತನಾಡುವವರು ಕರ್ನಾಟಕ ರಾಜ್ಯ ಮಾತ್ರವಲ್ಲದೆ ಪ್ರಪಂಚದ ಮೂಲೆ ಮೂಲೆಯಲ್ಲೂ ನೆಲೆಸಿದ್ದಾರೆ. ಭಾಷೆಗೊಂದು ತನ್ನದೇ ಅಸ್ತಿತ್ವ ಕೊಡಬೇಕು, ಈ ಭಾಷೆ ಕೇವಲ ಹಾಸ್ಯದ ಕಾರಣಕ್ಕಾಗಿ ಸೀಮಿತವಾಗಬಾರದು ಮತ್ತು ಇದು ಕುಂದಾಪುರದ ಜನರ ಬದುಕಿನ ಭಾಷೆಯಾಗಿದೆ ಎನ್ನುವ ಕಾರಣದಿಂದಲೆ ಈ ದಿನವನ್ನು ಆಚರಿಸಲಾಗುತ್ತದೆ.
ಕುಂದಾಪುರ ಹೆಸರಿನ ವಿಶೇಷತೆ
ಕುಂದವರ್ಮನೆಂಬ ರಾಜ ಈ ಪ್ರಾಂತ್ಯವವನ್ನು ಆಳ್ವಿಕೆ ಮಾಡಿದ್ದರಿಂದ ಇಲ್ಲಿಗೆ ಕುಂದಾಪುರ ಎಂದು ಹೇಳಲಾಗುತ್ತದೆ. ಹಾಗೆಯೇ ಇಲ್ಲಿರುವ ಕುಂದೇಶ್ವರ ದೇವಸ್ಥಾನದ ಕಾರಣದಿಂದಲೂ ಇಲ್ಲಿಗೆ ಈ ಹೆಸರು ಬಂತು ಎನ್ನುತ್ತಾರೆ. ‘ಕುಂದ’ ಎಂದರೆ ಮಲ್ಲಿಗೆ ಎನ್ನುವ ಅರ್ಥವು ಇದೆ. ಇಲ್ಲಿ ಮೊದಲು ಹೆಚ್ಚಾಗಿ ಮಲ್ಲಿಗೆ ಬೆಳೆಯುತ್ತಿದ್ದರಿಂದಲೂ ಕುಂದಾಪುರ ಎಂಬ ಹೆಸರು ಬಂದಿದೆ ಎಂದು ಇಲ್ಲಿನ ಇತಿಹಾಸ ಹೇಳುತ್ತದೆ.
ನಾಲ್ಕು ವರ್ಷಗಳಿಂದ ಕುಂದ ಕನ್ನಡ ದಿನದ ಆಚರಣೆ
ಕುಂದ ಕನ್ನಡ ಭಾಷೆಗೆ ತನ್ನದೆ ಆದ ಅಸ್ತಿತ್ವ, ಗೌರವ ನೀಡಬೇಕು ಎಂಬ ಉದ್ದೇಶದೊಂದಿಗೆ ಭಾಷೆಯ ಮೇಲಿನ ಪ್ರೀತಿ ಅಭಿಮಾನದಿಂದ ಕುಂದಾಪುರದ ಜನತೆ ವಿಶ್ವ ಕುಂದಾಪ್ರ ಎಂಬ ದಿನವನ್ನು ಕಳೆದ ನಾಲ್ಕು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ.
ಆಚರಣೆಗೆ ದಿನಾಂಕ ನಿಗದಿಯಿಲ್ಲ
ಈ ದಿನದ ಒಂದು ಪ್ರಮುಖ ವಿಶೇಷತೆಯೆಂದರೆ ಈ ದಿನದ ಆಚರಣೆಗೆ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿಲ್ಲ. ಬದಲಾಗಿ ಪ್ರತಿವರ್ಷ ಆಟಿ ಅಮಾವಾಸ್ಯೆ (ಆಷಾಡ ಅಮವಾಸ್ಯೆ) ದಿನದಂದು ಆಚರಿಸಿಕೊಂಡು ಬರುತ್ತಿದ್ದಾರೆ.
ಈ ದಿನವನ್ನು ಬಹಳ ವಿಜ್ರಂಭಣೆಯಿಂದ ಕುಂದಾಪುರದಲ್ಲಿ ಆಚರಿಸುತ್ತಾರೆ. ಇಲ್ಲಿನ ಕೆಲವು ಭಾಗಗಳಲ್ಲಿ ಆಟೋಟ ಸ್ಪರ್ಧೆ, ಕೆಸರುಗದ್ದೆ, ಕಂಬಳೊತ್ಸವ ಹೀಗೆ ಬೇರೆ ಬೇರೆ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಅಲ್ಲದೆ ಪ್ರಪಂಚದ ಬೇರೆ ಬೇರೆ ಕಡೆಯಲ್ಲಿ ನೆಲೆಸಿರುವ ಕುಂದ ಕನ್ನಡ ಮಾತನಾಡುವ ಜನರೂ ಈ ದಿನವನ್ನು ಬಹಳ ಗಮತ್ತಿನಿಂದ ಆಚರಿಸುತ್ತಾರೆ.
ವರ್ಷದಲ್ಲಿ ಒಂದು ದಿನ ಕುಂದ ಕನ್ನಡ ಭಾಷೆಯ ದಿನವನ್ನು ಇಲ್ಲಿನ ಮಣ್ಣಿನ ಸೊಬಗು, ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟವಾದ ಕಾರ್ಯಕ್ರಮಗಳ ಮೂಲಕ ಕುಂದಾಪುರದಲ್ಲಿ ಮಾತ್ರವಲ್ಲದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಾಗೂ ಪ್ರಪಂಚದ ಬೇರೆ ಬೇರೆ ಭಾಗದಲ್ಲಿ ಕುಂದ ಕನ್ನಡಿಗರು ಆಚರಿಸುವುದು ಖುಷಿಯ ವಿಚಾರವಾಗಿದೆ ಇದು ಕನ್ನಡ ನಾಡಿನ ಸೊಬಗನ್ನು, ವೈವಿಧ್ಯತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.