ಸುಡಾನ್ ಸಂಘರ್ಷದ ಹಿನ್ನೆಲೆ: 20 ಲಕ್ಷ ಮಕ್ಕಳು ಸ್ಥಳಾಂತರ, ಆಹಾರ ಕ್ಷಾಮ 

ಜಿನೀವಾ : ಸುಡಾನ್‌ನಲ್ಲಿ ನಡೆಯುತ್ತಿರುವ ಭೀಕರ ಸಂಘರ್ಷದಿಂದಾಗಿ 20 ಲಕ್ಷಕ್ಕೂ ಅಧಿಕ ಮಕ್ಕಳು ತಮ್ಮ ಮನೆಗಳಿಂದ ಬಲವಂತವಾಗಿ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ.ಸುಡಾನ್ನಲ್ಲಿ ಭೀಕರ ಸಶಸ್ತ್ರ ಸಂಘರ್ಷ ಮುಂದುವರೆದಿದೆ. ದೇಶದಲ್ಲಿನ ಮಕ್ಕಳ ಸ್ಥಿತಿ ತೀರಾ ಆತಂಕಕಾರಿಯಾಗಿದೆ.

“ಹಿಂಸಾಚಾರದಿಂದ ದೇಶದ ವಿನಾಶ ಮುಂದುವರೆದಿದ್ದು, 1.7 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಸುಡಾನ್ ಗಡಿ ದಾಟಿ ಹೋಗಲು ಕಾಯುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ ಮತ್ತು ಮತ್ತು 470,000 ಕ್ಕೂ ಹೆಚ್ಚು ಮಕ್ಕಳು ಈಗಾಗಲೇ ನೆರೆಯ ದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ ” ಎಂದು ಯುನಿಸೆಫ್ ಗುರುವಾರ ಪ್ರಕಟಿಸಿದ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಸುಡಾನ್ನಲ್ಲಿ ಸಮಗ್ರ ಆಹಾರ ಭದ್ರತಾ ಹಂತ ವರ್ಗೀಕರಣ (ಐಪಿಸಿ) (Food Security Phase Classification in Sudan) ವರದಿಯನ್ನು ಉಲ್ಲೇಖಿಸಿರುವ ಯುನಿಸೆಫ್, 2023 ರ ಜುಲೈ ಮತ್ತು ಸೆಪ್ಟೆಂಬರ್ ನಡುವೆ 20.3 ಮಿಲಿಯನ್ ಜನರು ಆಹಾರದಿಂದ ವಂಚಿತವಾಗಲಿದ್ದಾರೆ ಮತ್ತು 10 ಮಿಲಿಯನ್ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕಾಂಶದ ಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದೆ.

“ಖಾರ್ಟೂಮ್, ಡಾರ್ಫರ್ ಮತ್ತು ಕೊರ್ಡೊಫಾನ್ ಪ್ರದೇಶಗಳಲ್ಲಿ, ಕೇವಲ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಸಂಖ್ಯೆ ಆರೋಗ್ಯ ಸೌಲಭ್ಯಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅಭದ್ರತೆ ಮತ್ತು ಸ್ಥಳಾಂತರಗಳ ಕಾರಣದಿಂದ ರೋಗಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಆಸ್ಪತ್ರೆಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಅನೇಕ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳ ಮೇಲೆ ದಾಳಿಗಳು ನಡೆಯುತ್ತಿವೆ.” ಎಂದು ವರದಿಯಾಗಿದೆ.

ಪ್ರಸ್ತುತ ಸುಮಾರು 14 ಮಿಲಿಯನ್ ಮಕ್ಕಳಿಗೆ ಮಾನವೀಯ ಬೆಂಬಲದ ತುರ್ತು ಅವಶ್ಯಕತೆಯಿದೆ. ಬಹುತೇಕ ಮಕ್ಕಳು ಪ್ರತಿದಿನ ಭಯಾನಕ ಘಟನೆಗಳಿಗೆ ಸಾಕ್ಷಿಯಾಗುತ್ತಿದ್ದಾರೆ ಮತ್ತು ಬೆದರಿಕೆಗಳ ಮಧ್ಯೆ ಬದುಕುತ್ತಿದ್ದಾರೆ ಎಂದು ವರದಿ ಹೇಳಿದೆ. “ಡಾರ್ಫರ್ ಮತ್ತು ಖಾರ್ಟೂಮ್ನಂಥ ಸಂಘರ್ಷದ ಕೇಂದ್ರಬಿಂದುಗಳು ಮಾತ್ರವಲ್ಲದೆ ಭಾರಿ ಹೋರಾಟವು ಈಗ ದಕ್ಷಿಣ ಮತ್ತು ಪಶ್ಚಿಮ ಕೊರ್ಡೊಫಾನ್ ಸೇರಿದಂತೆ ಇತರ ಜನನಿಬಿಡ ಪ್ರದೇಶಗಳಿಗೆ ಹರಡಿದೆ. ತುರ್ತು ಅಗತ್ಯವಿರುವವರಿಗೆ ಜೀವರಕ್ಷಕ ಸೇವೆ ಒದಗಿಸುವುದು ಇದರಿಂದ ಸಾಧ್ಯವಾಗುತ್ತಿಲ್ಲ” ಎಂದು ಅದು ಹೇಳಿದೆ.

“ಕೆಲವೇ ತಿಂಗಳುಗಳಲ್ಲಿ ಎರಡು ದಶಲಕ್ಷಕ್ಕೂ ಹೆಚ್ಚು ಮಕ್ಕಳು ಸಂಘರ್ಷದಿಂದ ಸ್ಥಾನ ಪಲ್ಲಟಗೊಂಡಿದ್ದಾರೆ ಮತ್ತು ಅಸಂಖ್ಯಾತ ಮಕ್ಕಳು ಸಂಘರ್ಷದ ತೀವ್ರತೆಯಿಂದ ಕಂಗೆಟ್ಟಿದ್ದು, ತುರ್ತಾಗಿ ಇದರ ಬಗ್ಗೆ ಗಮನಹರಿಸುವ ಅಗತ್ಯವಿದೆ” ಎಂದು ಸುಡಾನ್ನಲ್ಲಿರುವ ಯುನಿಸೆಫ್ ದೇಶದ ಪ್ರತಿನಿಧಿ ಮನ್ದೀಪ್ ಒ’ಬ್ರಿಯಾನ್ ಹೇಳಿದರು.

ಕಳೆದ ಏಪ್ರಿಲ್ 15 ರಂದು ರಾಜಧಾನಿ ಖಾರ್ಟೂಮ್ನಲ್ಲಿ ಭಾರಿ ಗುಂಡಿನ ದಾಳಿ ಮತ್ತು ಸ್ಫೋಟಗಳೊಂದಿಗೆ ಈ ವರ್ಷದ ಸಶಸ್ತ್ರ ಹೋರಾಟ ಆರಂಭವಾಗಿದೆ. ಸುಡಾನ್ ನ ವಾಸ್ತವಿಕ ಆಡಳಿತಗಾರ ಅಬ್ದೆಲ್ ಫತಾಹ್ ಅಲ್-ಬುರ್ಹಾನ್ ನೇತೃತ್ವದ ಸೇನೆ ಮತ್ತು ಬುರ್ಹಾನ್ ನ ಪ್ರತಿಸ್ಪರ್ಧಿ ಮೊಹಮ್ಮದ್ ಹಮ್ದಾನ್ ದಗಾಲೊ ನೇತೃತ್ವದ ಕ್ಷಿಪ್ರ ಬೆಂಬಲ ಪಡೆಗಳು (ಆರ್‌ಎಸ್‌ಎಫ್) ಅಧಿಕಾರಕ್ಕಾಗಿ ಹೋರಾಡುತ್ತಿವೆ.

ಯುನಿಸೆಫ್ ಮೂಲಗಳ ಪ್ರಕಾರ, ಸುಡಾನ್ ನ ಎಲ್ಲಾ ರಾಜ್ಯಗಳಲ್ಲಿ ಜೀವ ರಕ್ಷಕ ವಸ್ತುಗಳು ಸೇರಿದಂತೆ ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ತೀವ್ರ ಕೊರತೆ ಉಂಟಾಗಿದೆ. ನೈಲ್ ಹಾಗೂ ಇತರ ರಾಜ್ಯಗಳಲ್ಲಿ ದಡಾರ ಸೇರಿದಂತೆ ಇನ್ನೂ ಹಲವಾರು ರೋಗಗಳು ಹರಡುತ್ತಿರುವ ಬಗ್ಗೆ ವರದಿಯಾಗಿದೆ.