ಕರಾಚಿ: ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕೆ ನೈತಿಕ ಹೊಣೆ ಹೊತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವಕ್ಕೆ ಬಾಬರ್ ಆಜಂ ರಾಜೀನಾಮೆ ನೀಡಿದ್ದಾರೆ.
ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬಹುದಾದ ಪ್ರಮುಖ ತಂಡಗಳಲ್ಲಿ ಒಂದಾಗಿ ಸ್ಪರ್ಧೆಗಿಳಿದಿದ್ದ ಪಾಕಿಸ್ತಾನ ತಂಡ ಆಡಿದ 9 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು, 5 ರಲ್ಲಿ ಸೋತಿದೆ. ಇದು ಪಾಕ್ ಮಾಜಿ ಆಟಗಾರರ, ಕ್ರಿಕೆಟ್ ಆಡಳಿತ ಮಂಡಳಿಯ ಹಾಗೂ ಪಾಕ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.
ಪಾಕ್ ವಿಶ್ವಕಪ್ ಅಭಿಯಾನ ಮುಗಿಸುವ ಮುನ್ನವೇ ಬಾಬರ್ ನಾಯಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂಬ ಕೂಗು ಜೋರಾಗಿ ಕೇಳಿಬಂದಿತ್ತು. ಇದೀಗ ವಿಶ್ವಕಪ್ ಅಭಿಯಾನವನ್ನು ಮುಗಿಸಿ ತಾಯ್ನಾಡಿಗೆ ಮರಳಿದ ಬಳಿಕ ಬಾಬರ್ ಆಝಂ, ಕ್ರಿಕೆಟ್ನ ಎಲ್ಲಾ ಸ್ವರೂಪದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
ಬಾಬರ್ ಆಜಂ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ನಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ನಾಯಕನ ಸ್ಥಾನಕ್ಕೆ ಇಬ್ಬರು ಆಟಗಾರರು ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್, ವೇಗಿ ಶಹೀನ್ ಅಫ್ರಿದಿ ನಾಯಕತ್ವ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ ಎಂದು ವರದಿಯಾಗಿದೆ.