ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಕಡಿಯಾಳಿ ದೇಗುಲದಲ್ಲಿ ಸಾಮೂಹಿಕ ರಾಮತಾರಕ ಮಂತ್ರ ಜಪಪಠಣ 

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ವತಿಯಿಂದ ಕಡಿಯಾಳಿಯ ಮಹಿಷಮರ್ಧಿನಿ ದೇವಸ್ಥಾನದ ಕಾತ್ಯಾಯಿನಿ ಮಂಟಪದಲ್ಲಿ ಮಂಗಳವಾರ ಸಾಮೂಹಿಕ ರಾಮತಾರಕ ಮಂತ್ರ ಜಪಪಠಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಹನುಮಾನ್ ಚಾಲೀಸ್ ಪಠಣ, ಶ್ರೀರಾಮ ಸಂಕೀರ್ತನೆ ನಡೆಯಿತು. ರಾಮದೇವರ ಪ್ರತಿಷ್ಠೆ, ಗಣಹೋಮ ಜರುಗಿತು. ಬಳಿಕ ನಡೆದ ಧಾರ್ಮಿಕ ಸಭಾಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಹಿಂದು ಪರಿಷತ್ ದಕ್ಷಿಣ ಕ್ಷೇತ್ರದ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ, ರಾಮಮಂದಿರ ಭಾರತ ದೇಶದ ಪರಂಪರೆಯ ಪ್ರತೀಕ. ಹಾಗಾಗಿ ಧಾರ್ಮಿಕ ಅನುಷ್ಠಾನಗಳ ಮೂಲಕ ರಾಮಮಂದಿರ ನಿರ್ಮಾಣದ ಯಶಸ್ವಿಗಾಗಿ ನಾವೆಲ್ಲರೂ ಪ್ರಾರ್ಥಿಸಬೇಕು ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಪ್ರತಿಯೊಬ್ಬ ಹಿಂದುವಿನ ಸಾವಿರ ವರ್ಷದ ಕನಸು ಹಾಗೂ ರಾಷ್ಟ್ರೀಯ ಸ್ವಾಭಿಮಾನ ಪುನರ್‌ನಿರ್ಮಾಣದ ಆಶಯವಾಗಿದೆ. ರಾಮ ಮಂದಿರ ಮಾತ್ರವಲ್ಲದೆ, ಮಥುರ ಶ್ರೀಕೃಷ್ಣ ಜನ್ಮಸ್ಥಳ, ಕಾಶಿ ವಿಶ್ವನಾಥ ಮಂದಿರ ನಿರ್ಮಾಣ ಕೂಡ ಹಿಂದುಗಳ ಕನಸಾಗಿದೆ ಎಂದರು.
ಸಾಹಿತಿ, ಚಿಂತಕ ವೇದ ಬ್ರಹ್ಮಶ್ರೀ ಸೂರಾಲು ದೇವಿ ಪ್ರಸಾದ್ ತಂತ್ರಿ ಮಾತನಾಡಿ, ರಾಮ ಎಂದೂ ನಾನೊಬ್ಬ ದೇವಮಾನವನೆಂದು ಹೇಳಿಕೊಂಡಿಲ್ಲ. ತನ್ನ ಚಾರಿತ್ರ್ಯದಿಂದ ದೇವರಾಗಿದ್ದಾನೆ. ರಾಮನ ಆದರ್ಶಗಳನ್ನು ಕಂಡಂತಹ ನಮ್ಮ ಸನಾತನ ಪರಂಪರೆ ಆತನನ್ನು ದೇವರೆಂದು ಬಣ್ಣಿಸಿದೆ ಎಂದರು. ಇಂಥಾ ಧಾರ್ಮಿಕ ಅನುಷ್ಠಾನಗಳ ಮೂಲಕ ರಾಮ ಮಂದಿರ ನಿರ್ಮಾಣದ ಸಂಕಲ್ಪ ಇನ್ನಷ್ಟು ಗಟ್ಟಿಗೊಳ್ಳಬೇಕು ಎಂದು ಹಾರೈಸಿದರು.
ವಿಶ್ವಹಿಂದು ಪರಿಷತ್ ಮುಖಂಡರಾದ ನಾರಾಯಣ ಮಣಿಯಾಣಿ, ಸುಪ್ರಭಾ ಆಚಾರ್ಯ, ಶರಣ್‌ಪಂಪ್‌ವೆಲ್ ಮತ್ತು  ಬಜರಂಗದಳ ಮುಖಂಡರಾದ ಸುನಿಲ್.ಕೆ.ಆರ್, ದಿನೇಶ್ ಮೆಂಡನ್, ದುರ್ಗಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಭಾಗ್ಯಶ್ರೀ ಐತಾಳ್ ಉಪಸ್ಥಿತರಿದ್ದರು. ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.