ಅಯೋಧ್ಯೆ: ರಾಮಮಂದಿರಕ್ಕೆ ಕಲ್ಲುಗಳ ಬಳಕೆ, ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಮಂದಿರಕ್ಕೆ ಏನೂ ಆಗದು- ಚಂಪತ್‌ ರಾಯ್‌

ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮೂರುವರೆ ವರ್ಷಗಳೊಳಗೆ ಮಂದಿರ ಪೂರ್ಣಗೊಳ್ಳಲಿದೆ ಎಂದು ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ.
ಈ ಕುರಿತು ಟ್ರಸ್ಟ್‌ನ ಅಧಿಕೃತ ಟ್ವಿಟರ್‌ ಖಾತೆಯಿಂದ ಮಾಹಿತಿ ನೀಡಲಾಗಿದೆ. ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಉತ್ತರಾಖಂಡದ ರೂರ್ಕಿಯಲ್ಲಿರುವ ಕೇಂದ್ರ ಕಟ್ಟಡ ಅಧ್ಯಯನ ಸಂಸ್ಥೆ (ಸಿಬಿಆರ್‌ಐ), ಚೆನ್ನೈನ ಐಐಟಿ ಮತ್ತು ‘ಎಲ್ ಅ್ಯಂಡ್‌ ಟಿ (ಲಾರ್ಸೆನ್ ಮತ್ತು ಟೌಬ್ರೊ)’ ಎಂಜಿನಿಯರ್‌ಗಳು ಮಂದಿರದ ಸ್ಥಳದಲ್ಲಿ ಮಣ್ಣು ಪರೀಕ್ಷೆಯಲ್ಲಿ ತೊಡಗಿದ್ದಾರೆ ಎಂದು ಟ್ವೀಟ್‌ ಮೂಲಕ ತಿಳಿಸಿದೆ.
ಮಂದಿರ ನಿರ್ಮಾಣದಲ್ಲಿ ಕಬ್ಬಿಣವನ್ನು ಬಳಸದೇ ಇರಲು ನಿರ್ಧರಿಸಲಾಗಿದೆ. ಅದೇ ರೀತಿ ಭಾರತದ ಪ್ರಾಚೀನ ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿ ಮಂದಿರ ನಿರ್ಮಾಣ ಮಾಡಲಾಗುತ್ತಿದ್ದು, ಭೂಕಂಪ, ಬಿರುಗಾಳಿಗಳು ಮತ್ತು ಇತರ ನೈಸರ್ಗಿಕ ವಿಕೋಪಗಳನ್ನು ತಾಳಿಕೊಳ್ಳುವಂತೆ ದೇಗುಲವನ್ನು ಕಟ್ಟಲಾಗುತ್ತಿದೆ ಎಂದು ಹೇಳಿದೆ.
ರಾಮನ ದೇವಾಲಯ ನಿರ್ಮಿಸಲು ಕಲ್ಲುಗಳನ್ನು ಮಾತ್ರ ಬಳಸಲಾಗುತ್ತದೆ. ಈ ದೇಗುಲವು 1,000 ವರ್ಷಗಳಿಗೂ ಹೆಚ್ಚು ಕಾಲ ಏನೂ ಆಗದೇ ಉಳಿಯಲಿದೆ. ದೇವಾಲಯದ ನಿರ್ಮಾಣದ ಉಸ್ತುವಾರಿಯನ್ನು ‘ಎಲ್‌ ಅ್ಯಂಡ್‌ ಟಿ’ ನೋಡಿಕೊಳ್ಳುತ್ತಿದೆ. ಚೆನ್ನೈ ಐಐಟಿಯು ಮಣ್ಣಿನ ಬಲವನ್ನು ಪರೀಕ್ಷಿಸುತ್ತಿದೆ. ಕಟ್ಟಡವು ಭೂಕಂಪ ನಿರೋಧಕವಾಗಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಿಬಿಆರ್‌ಐ ಸೇವೆ ಪಡೆದುಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷತ್‌ನ ಹಿರಿಯ ಕಾರ್ಯವಾಹಕ ಚಂಪತ್‌ ರಾಯ್‌ ತಿಳಿಸಿದ್ದಾರೆ.