ರೈತ ಸಂತೆಯ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸಿ: ಡಿಸಿ ಜಿ. ಜಗದೀಶ್

ಉಡುಪಿ: ರೈತ ಸೇವಾ ಕೇಂದ್ರದ ಆವರಣದಲ್ಲಿ ಪ್ರತಿ ಗುರುವಾರ ರೈತ ಸಂತೆಯನ್ನು ನಡೆಸುವ ಮೂಲಕ ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ, ಮಧ್ಯವರ್ತಿಗಳ ಹಾವಳಿ ತಪ್ಪಿಸುವಂತೆ ಹಾಗೂ ಗ್ರಾಹಕರಿಗೆ ತಾಜಾ ತರಕಾರಿಗಳನ್ನು ಪೂರೈಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರೈತ ಸೇವಾ ಕೇಂದ್ರದ ಜಿಲ್ಲಾ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತ ಸಂತೆಯಲ್ಲಿ ಭಾಗವಹಿಸುವ ರೈತರಿಗೆ ಇಲಾಖೆ ವತಿಯಿಂದ ಗುರುತಿನ ಚೀಟಿಗಳನ್ನು ನೀಡುವಂತೆ ಸೂಚಿಸಿದ ಅವರು, ಆಸಕ್ತಿಯುಳ್ಳ ರೈತರು ರೈತ ಸಂತೆಯಲ್ಲಿ ಭಾಗವಹಿಸಲು ಸಲ್ಲಿಸಿರುವ ಅರ್ಜಿಗಳನ್ನು ಸ್ವೀಕರಿಸುವಂತೆ ತೋಟಗಾರಿಕಾ ಉಪನಿರ್ದೇಶಕರಿಗೆ ತಿಳಿಸಿದರು.

ಸಭೆಯಲ್ಲಿ ರೈತ ಸೇವಾ ಕೇಂದ್ರದ ಜಿಲ್ಲಾ ಉಸ್ತುವಾರಿ ಸಮಿತಿಯ ಸದಸ್ಯರು, ಮಳಿಗೆದಾರರು, ಬೆನಗಲ್ ತರಕಾರಿ ಬೆಳೆಗಾರರ ಸೌಹಾರ್ದ ಸೊಸೈಟಿಯ ಕಾರ್ಯದರ್ಶಿ, ಮತ್ತಿತರರು ಉಪಸ್ಥಿತರಿದ್ದರು.