ಬೆಂಗಳೂರು: ಡ್ರಾಪ್ ಕೊಡಿಸುವುದಾಗಿ ಹೇಳಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆಟೋ ಚಾಲಕನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಆಟೋ ಚಾಲಕ ದೇವನಹಳ್ಳಿಯ ಮುಬಾರಕ್ ಎಂದು ಗುರುತಿಸಲಾಗಿದೆ. 19 ವರ್ಷದ ಅತ್ಯಾಚಾರ ಸಂತ್ರಸ್ತೆ ಕಾಲೇಜು ಯುವತಿ ಮಾಗಡಿ ರಸ್ತೆಯ ಬಳಿಯ ನಿವಾಸಿಯಾಗಿದ್ದು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಾರೆ. ಈವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಯಲ್ಲಿ ರಿಸೆಪ್ಷನಿಸ್ಟ್ ಆಗಿ ಕೂಡ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದರು.
ಡಿಸೆಂಬರ್ 9ರಂದು, ಮದುವೆ ಕಾರ್ಯಕ್ರಮವೊಂದರಲ್ಲಿ ನಿರೂಪಣೆ ಮಾಡಲು ಥಣಿಸಂದ್ರಕ್ಕೆ ಬಂದಿದ್ದರು. ಮದುವೆ ನಡೆದ ಸಭಾಂಗಣದಲ್ಲಿ ರಾತ್ರಿಯವರೆಗೂ ಇದ್ದು ನಂತರ ಮರುದಿನ ಬೆಳಗ್ಗೆ ಎದ್ದು ಮನೆಗೆ ಹೋಗಲು ಹತ್ತಿರದ ಬಸ್ ನಿಲ್ದಾಣಕ್ಕೆ ಬಂದಿದ್ದರು.
ಈ ಸಂದರ್ಭದಲ್ಲಿ ಆಟೋ ಚಾಲಕ ತಾನು ಮಾರ್ಕೆಟ್ ಕಡೆಗೆ ಹೋಗುತ್ತಿದ್ದು ಡ್ರಾಪ್ ಕೊಡುತ್ತೇನೆಂದು ಹೇಳಿ ಆಟೋದಲ್ಲಿ ಕೂರಿಸಿಕೊಂಡು ಹೋಗಿದ್ದಾನೆ. ಯುವತಿ ನಂಬಿ ಆಟೋ ಹತ್ತಿ ಕುಳಿತಳು. ಕೆಲವು ಕಿಲೋ ಮೀಟರ್ ವರೆಗೆ ಹೋದ ನಂತರ ಆಟೋ ಚಾಲಕ ತಪ್ಪು ಹಾದಿಯಲ್ಲಿ ಹೋಗತೊಡಗಿದನು. ಆಗ ಯುವತಿ ಎಚ್ಚರಿಸಿ ಆಟೋ ನಿಲ್ಲಿಸುವಂತೆ ಹೇಳಿದರು.
ಆಗ ಆಟೋ ಚಾಲಕ ಸ್ನೇಹಿತನ ಕೈಯಿಂದ ಹಣ ತೆಗೆದುಕೊಳ್ಳಬೇಕು ಎಂದು ಹೇಳಿದ ನಿರ್ಜನ ಪ್ರದೇಶಕ್ಕೆ ಆಟೋ ತೆಗೆದುಕೊಂಡು ಹೋಗಿ ಅಲ್ಲಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದನು.
ಬಳಿಕ ಮುಖ್ಯ ರಸ್ತೆ ಬಳಿ ಬಿಟ್ಟು ಬೊಬ್ಬೆ ಹಾಕದಂತೆ, ಹಾಕಿದರೆ ಕೊಂದು ಬಿಡುತ್ತೇನೆಂದು ಬೆದರಿಕೆ ಹಾಕಿದನು. ಆಗ ಬೈಕ್ ನಲ್ಲಿ ಬಂದ ವ್ಯಕ್ತಿಯ ಸಹಾಯದಿಂದ ಸಂಪಂಗಿಹಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದಳು.
ಆಟೋ ಸಂಖ್ಯೆ ಗುರುತು ಹಿಡಿದುಕೊಂಡಿದ್ದ ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ. ವಿವರ ಪಡೆದ ಪೊಲೀಸರು ಕೆಲ ದಿನಗಳ ನಂತರ ಆರೋಪಿಯನ್ನು ಬಂಧಿಸಿದ್ದಾರೆ.