ಉಡುಪಿ: ಭೂಗತ ಲೋಕದಲ್ಲಿ ಕುಖ್ಯಾತಿ ಗಳಿಸಿದ್ದ ರವಿ ಪೂಜಾರಿ, ಆರು ವರ್ಷಗಳಿಂದ ಬೆಂಗಳೂರಿನ ಜೈಲಿನಲ್ಲಿದ್ದು, ತಾಯಿಯ ಅಂತಿಮ ದರ್ಶನಕ್ಕಾಗಿ ಶುಕ್ರವಾರ ಹುಟ್ಟೂರಿಗೆ ಬಂದಾಗ ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾದರು. ಮಲ್ಪೆ ಸಮೀಪದ ನೆರ್ಗಿಯಲ್ಲಿರುವ ಹಿರಿಯರ ಮನೆಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ ಅವರು, ತಾಯಿಯ ಮೃತದೇಹ ಕಂಡ ಕೂಡಲೇ ಬಿಕ್ಕಿ ಬಿಕ್ಕಿ ಅತ್ತರು.
ಉಡುಪಿ ಮೂಲದ ರವಿ ಪೂಜಾರಿಯ ತಾಯಿ ಸುಶೀಲಾ ಪೂಜಾರ್ತಿ (86) ಗುರುವಾರ ರಾತ್ರಿ ನಿಧನರಾಗಿದ್ದರು. ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರವಿ ಪೂಜಾರಿಗೆ ರಾಜ್ಯ ಹೈಕೋರ್ಟ್ ಅನುಮತಿ ನೀಡಿತ್ತು. ನ್ಯಾಯಾಲಯದ ಆದೇಶದಂತೆ ಶುಕ್ರವಾರ ಬೆಳಿಗ್ಗೆ ಬೆಂಗಳೂರಿನಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಅವರನ್ನು ಉಡುಪಿಗೆ ಕರೆತರಲಾಯಿತು. ಬೆಳಿಗ್ಗೆ 10 ಗಂಟೆಗೆ ನೆರ್ಗಿಯ ಸ್ವಗೃಹದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಅವರು ಪಾಲ್ಗೊಂಡರು.
ತಾಯಿಯ ಮೃತದೇಹ ಕಂಡು ಭಾವುಕಹುಟ್ಟಿದ ಮನೆಗೆ ಬಂದ ರವಿ ಪೂಜಾರಿ, ತಾಯಿಯ ಮೃತದೇಹದ ಮುಂದೆ ಕೆಲಕಾಲ ಮೌನವಾಗಿ ನಿಂತು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಬಳಿಕ ತಾಯಿಯ ಮೃತದೇಹ ಕಂಡು ಬಿಕ್ಕಿ ಬಿಕ್ಕಿ ಅತ್ತು ಕುಸಿದು ಕುಳಿತರು. ನಂತರ ಅಂತ್ಯಕ್ರಿಯೆಯ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ಬೆಂಗಳೂರು ಕಾರಾಗೃಹ ಇಲಾಖೆಯ ಪೊಲೀಸರ ಸರ್ಪಗಾವಲಿನಲ್ಲಿ ಅವರನ್ನು ಉಡುಪಿಗೆ ಕರೆತರಲಾಗಿದ್ದು, ಸ್ಥಳೀಯ ಪೊಲೀಸರೂ ಹೆಚ್ಚುವರಿ ಭದ್ರತೆ ಒದಗಿಸಿದ್ದರು. ಈ ಕುರಿತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.
ಸೆನೆಗಲ್ನಲ್ಲಿ ಬಂಧನಭೂಗತ ಪಾತಕಿ ಛೋಟಾ ರಾಜನ್ನ ಸಹಚರನಾಗಿದ್ದ ರವಿ ಪೂಜಾರಿ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಕೊಲೆ, ಕೊಲೆಯತ್ನ, ಜೀವ ಬೆದರಿಕೆ ಮತ್ತು ಹಫ್ತಾ ವಸೂಲಿ ಸೇರಿದಂತೆ 90ಕ್ಕೂ ಅಧಿಕ ಅಪರಾಧ ಪ್ರಕರಣಗಳು ದಾಖಲಾಗಿವೆ. ಸುಮಾರು 26 ವರ್ಷಗಳ ಕಾಲ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು ಕರ್ನಾಟಕ ಪೊಲೀಸರು 2019ರ ಜನವರಿಯಲ್ಲಿ ಪಶ್ಚಿಮ ಆಫ್ರಿಕಾದ ಸೆನೆಗಲ್ನಲ್ಲಿ ಬಂಧಿಸಿ ಭಾರತಕ್ಕೆ ಕರೆತಂದಿದ್ದರು.
ಸೆನೆಗಲ್ನ ರಾಜಧಾನಿ ಡಾಕರ್ನ ಕ್ಷೌರಿಕ ಅಂಗಡಿಯೊಂದರಲ್ಲಿ ಜನವರಿ 21ರಂದು ಆತನನ್ನು ಬಂಧಿಸಲಾಗಿತ್ತು. ಆಂಥೋನಿ ಫೆರ್ನಾಂಡಿಸ್ ಎಂಬ ಹೆಸರಿನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ ಆತ, ಅಲ್ಲಿ ‘ನಮಸ್ತೆ ಇಂಡಿಯಾ’ ಹೆಸರಿನ ರೆಸ್ಟೋರೆಂಟ್ಗಳನ್ನು ನಡೆಸುತ್ತಿದ್ದ ಎನ್ನಲಾಗಿದೆ.
ಬಂಧನದ ಬಳಿಕ ವಿವಿಧ ಪ್ರಕರಣಗಳ ವಿಚಾರಣೆ ಎದುರಿಸುತ್ತಿರುವ ರವಿ ಪೂಜಾರಿ ಕಳೆದ ಆರು ವರ್ಷಗಳಿಂದ ಬೆಂಗಳೂರಿನ ಜೈಲಿನಲ್ಲಿದ್ದಾನೆ.
ಮರಳಿ ಜೈಲಿಗೆ ಕರೆದೊಯ್ಯಲು ಆದೇಶತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿರುವ ಹೈಕೋರ್ಟ್, ಬೆಂಗಳೂರಿನಿಂದ ಉಡುಪಿಗೆ ಕರೆತರುವ ಪೊಲೀಸ್ ಎಸ್ಕಾರ್ಟ್ ಮತ್ತು ಭದ್ರತಾ ವ್ಯವಸ್ಥೆಯ ಸಂಪೂರ್ಣ ವೆಚ್ಚವನ್ನು ರವಿ ಪೂಜಾರಿಯೇ ಭರಿಸಬೇಕು ಎಂದು ಸೂಚಿಸಿತ್ತು. ಅಂತ್ಯಕ್ರಿಯೆ ಪೂರ್ಣಗೊಂಡ ಕೂಡಲೇ ಮರಳಿ ಜೈಲಿಗೆ ಕರೆದೊಯ್ದು ಸೇರಿಸುವಂತೆಯೂ ನ್ಯಾಯಾಲಯ ಆದೇಶಿಸಿತ್ತು.















